ಉದಯವಾಹಿನಿ, ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಪರೂಪದ ವನ್ಯಜೀವಿ ಮಣ್ಣು ಮುಕ್ಕ ಹಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಸಿಐಡಿ ಅರಣ್ಯ ಸಂಚಾರಿ ದಳ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತರಿಂದ ಅಪರೂಪದ ಮಣ್ಣು ಮುಕ್ಕ ಹಾವು ಹಾಗೂ ಒಂದು ಕಾರು ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಇಲಾಖೆ ಹಾಗೂ ಸಿಐಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ಯತೀಶ್, ವಂಶಿಕೃಷ್ಣ, ಆರೀಫ್ ಹಾಗೂ ಷಫಿ ಎಂದು ಗುರುತಿಸಲಾಗಿದೆ. ಇವರು ಮಣ್ಣು ಮುಕ್ಕ ಹಾವನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಖರೀದಿದಾರರನ್ನು ಸಂಪರ್ಕಿಸುತ್ತಿದ್ದರು ಎಂಬ ಮಾಹಿತಿ ಸಿಐಡಿ ಅರಣ್ಯ ಸಂಚಾರಿ ದಳಕ್ಕೆ ಲಭಿಸಿತ್ತು.

ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಅಧಿಕಾರಿಗಳು: ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ವಶಪಡಿಸಿಕೊಂಡ ಮಣ್ಣು ಮುಕ್ಕ ಹಾವು ಆರೋಗ್ಯವಾಗಿದ್ದು, ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹಾವನ್ನು ಯಾವ ಪ್ರದೇಶದಿಂದ ಹಿಡಿದು ತರಲಾಗಿತ್ತು ಹಾಗೂ ಇದರ ಹಿಂದೆ ದೊಡ್ಡ ಜಾಲವಿದೆಯೇ? ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವರ ಪಾತ್ರ ಇರುವ ಶಂಕೆಯೂ ವ್ಯಕ್ತವಾಗಿದೆ.ಮಣ್ಣು ಮುಕ್ಕ ಹಾವು ಅಪರೂಪದ ಜಾತಿಗೆ ಸೇರಿದೆ. ಇದನ್ನು ಅಕ್ರಮವಾಗಿ ಸಾಗಾಟ ಹಾಗೂ ಮಾರಾಟ ಮಾಡಿದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಠಿಣ ಶಿಕ್ಷೆಯಿದೆ. ಆದರೂ ಕೆಲ ದುಷ್ಕರ್ಮಿಗಳು ಅಪಾರ ಹಣದ ಲಾಭದಾಸೆಯಿಂದ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!