ಉದಯವಾಹಿನಿ, ಮೈಸೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೈಸೂರು ನಗರದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಸಂಸದ ಯದುವೀರ್​ ಒಡೆಯರ್ ಆಗ್ರಹಿಸಿದ್ದಾರೆ. ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಆಹ್ವಾನದ ಮೇರೆಗೆ ಸೋಮವಾರ ಸಂಜೆ ಮಾರುಕಟ್ಟೆಗೆ ಭೇಟಿ ನೀಡಿದ್ದ ಅವರು, ವ್ಯಾಪಾರಸ್ಥರಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವರಾಜ ಮಾರುಕಟ್ಟೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಬಿಲ್ಡಿಂಗ್ ನೆಲಸಮಗೊಳಿಸದೇ ಸಂರಕ್ಷಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸದೇ ಸಂರಕ್ಷಣೆ ಮೂಲಕ ಪುನರುಜ್ಜಿವನಗೊಳಿಸಬೇಕೆಂದು ನಾನು ಅರಮನೆಗೆ ಬರುವ ಮುಂಚೆಯಿಂದಲೇ ಸ್ಥಳೀಯರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ನನಗೂ ಹೋರಾಟದಲ್ಲಿ ಕೈಜೋಡಿಸಲು ಅವಕಾಶ ಕೊಟ್ಟಿದ್ದಾರೆ. ಅವರ ಹೋರಾಟಕ್ಕೆ ಇಂದು ಜಯ ಸಿಕ್ಕಿದಂತಾಗಿದೆ. ರಾಜ್ಯ ಸರ್ಕಾರ ಕೂಡ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸಬೇಕು. ಈ ವಿಚಾರ ಸಂಬಂಧ ಮೇಲ್ಮನವಿ ಮೂಲಕ ಕೋರ್ಟ್‌ನಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಮೇಲ್ಮನವಿ ಮೂಲಕ ಮುಂದುವರೆಯುತ್ತೇವೆ ಎಂದು ಜಿಲ್ಲಾಧಿಕಾರಿಗಳು ನಿಲುವು ವ್ಯಕ್ತಪಡಿಸಿದ್ದಾರೆ. ದಯವಿಟ್ಟು ಅದನ್ನು ಮಾಡಬಾರದೆಂದು ಆಗ್ರಹಿಸುತ್ತೇನೆ ಎಂದರು.

ಸಿಎಂಗೆ ಪತ್ರ: ಈ ಎರಡೂ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸಿ ಪುನರ್ ನಿರ್ಮಾಣಕ್ಕೆ ಮೀಸಲಿಟ್ಟ ಹಣವನ್ನು ಸಂರಕ್ಷಣೆ ಕಾಮಗಾರಿಗೆ ನೆಲಸಮಗೊಳಿಸದೇ ಬಳಸ ಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರತ ಬರೆದಿದ್ದೇನೆ. ಒಂದೊಂದು ಭಾಗ ಬಿಟ್ಟುಕೊಟ್ಟು ಸಂರಕ್ಷಣೆ ಕಾಮಗಾರಿಗೆ ಎಲ್ಲಾ ಅಗತ್ಯ ಸಹಕಾರ ನೀಡಲು ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರು ಸಿದ್ಧರಿದ್ದಾರೆ. ಬಹಳಷ್ಟು ಐತಿಹಾಸಿಕ ಮಾರುಕಟ್ಟೆಗಳನ್ನು ಸಂರಕ್ಷಣೆ ಮಾಡಿರುವುದಕ್ಕೆ ವಿಶ್ವದಾದ್ಯಂತ ಉದಾಹರಣೆಗಳಿವೆ. ಅದೇನು ಕಷ್ಟವಲ್ಲ ಮನಸ್ಸು ಬೇಕಷ್ಟೇ ಎಂದು ತಿಳಿಸಿದರು. ಶಿಥಿಲಾವಸ್ಥೆ ಪ್ರಮಾಣ ತಗ್ಗಿಸಬಹುದಿತ್ತು: ದೇವರಾಜ ಮಾರುಕಟ್ಟೆಯನ್ನು ನೆಲಸಮಗೊಳಿಸಿ ಪುನರ್ ನಿರ್ಮಿಸುವುದರ – ವಿರುದ್ಧ 2005ರಿಂದಲೂ ಹೋರಾಟ ನಡೆಯುತ್ತಿದ್ದು, ಆಗಲೇ ಹೋರಾಟಗಾರರ ಮನವಿಗೆ ಸ್ಪಂದಿಸಿ ಸಂರಕ್ಷಣೆ ಕಾಮಗಾರಿ ಕೈಗೊಂಡಿದ್ದರೆ ಕಟ್ಟಡದ ಶಿಥಿಲಾವಸ್ಥೆ ಪ್ರಮಾಣ ತಗ್ಗಿಸಬಹುದಿತ್ತು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!