ಉದಯವಾಹಿನಿ, ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಟಿ. ಡಿ. ರಾಜೇಗೌಡ ಅವರು ಮುಂದುವರೆಯುವಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆ ಕಾರ್ಯಕರ್ತರು ಅವರ ನಾಮಫಲಕಕ್ಕೆ ಹಾಲಿನ ಅಭಿಷೇಕ ಮಾಡಿದರು.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಪ್ರಜಾಪ್ರಭುತ್ವಕ್ಕೆ ಸಂದ ಜಯ ಮತ್ತು ಸತ್ಯಕ್ಕೆ ಸಿಕ್ಕ ಪ್ರತಿಫಲ ಎಂದು ಕಾರ್ಯಕರ್ತರು ಬಣ್ಣಿಸಿದರು. ಎನ್. ಆರ್. ಪುರದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಈ ಹಿಂದೆ ಕಿತ್ತೆಸೆಯಲಾಗಿದ್ದ ಶಾಸಕರ ಕಚೇರಿಯ ನಾಮಫಲಕದ ಬೋರ್ಡನ್ನು ಅದೇ ಜಾಗದಲ್ಲಿ ಪುನರ್ ಸ್ಥಾಪಿಸಿದರು. ನಂತರ ರಾಜೇಗೌಡ ಅವರ ಪರವಾಗಿ ಜಯ ಘೋಷಗಳನ್ನು ಕೂಗಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದರು.
ಕ್ಷೇತ್ರದ ರಾಜಕೀಯ ಹಗ್ಗ ಜಗ್ಗಾಟ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶವು ಕ್ಷೇತ್ರದಲ್ಲಿ ಭಾರಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಮೇ 2 ರಂದು ನಡೆದ ಮರು ಎಣಿಕೆ ಪ್ರಕ್ರಿಯೆಯನ್ನು ನ್ಯಾಯಾಲಯವು ರದ್ದುಗೊಳಿಸಿದ್ದು, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.ಸದ್ಯಕ್ಕಂತೂ ರಾಜೇಗೌಡ ಅವರ ಶಾಸಕ ಸ್ಥಾನ ಸುಭದ್ರವಾಗಿದೆ. ಆದರೆ, ಇದೇ 21 ರಂದು ಸುಪ್ರೀಂಕೋರ್ಟ್ ಯಾವ ನಿರ್ಣಯ ಕೈಗೊಳ್ಳಲಿದೆ, ಈ ಕ್ಷೇತ್ರದ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
