ಉದಯವಾಹಿನಿ, ಬೆಳಗಾವಿ: ಸಪ್ತನದಿಗಳ ಜಿಲ್ಲೆ ಬೆಳಗಾವಿಯಲ್ಲಿ ನದಿ, ಕೆರೆ, ಹಳ್ಳ – ಕೊಳ್ಳಗಳು ಬರಿದಾಗುತ್ತಿವೆ. ಇವುಗಳನ್ನೇ ನೆಚ್ಚಿಕೊಂಡಿದ್ದ ಜನ – ಜಾನುವಾರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಂತರ್ಜಲ ಮಟ್ಟ ಕೂಡ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ವೇದಗಂಗಾ, ದೂಧಗಂಗಾ ನದಿಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಅಲ್ಲದೇ ಬಹಳಷ್ಟು ಕೆರೆ, ಬಾವಿ, ಹಳ್ಳಗಳು ಬತ್ತಿ ಹೋಗುತ್ತಿವೆ. ಇದರ ಪರಿಣಾಮ ಕೊಳವೆ ಬಾವಿಗಳಲ್ಲೂ ನೀರು ಬರುತ್ತಿಲ್ಲ. ಹಾಗಾಗಿ, ಕಬ್ಬು, ತರಕಾರಿ ಬೆಳೆಗಳು ನೀರಿಲ್ಲದೇ ಒಣಗುವ ಸ್ಥಿತಿಗೆ ತಲುಪಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಒಂದು ವೇಳೆ, ಮುಂಗಾರು ಮಳೆ ವಿಳಂಬವಾರೆ ಮತ್ತಷ್ಟು ಪರಿಸ್ಥಿತಿ ಗಂಭೀರ ಆಗುವ ಸಾಧ್ಯತೆ ಇದೆ. ಆಗ ಹನಿ ನೀರಿಗೂ ಪರದಾಡುವ ಸ್ಥಿತಿ ಉದ್ಭವಿಸಲಿದೆ. ಈಗಾಗಲೇ ಬೆಳಗಾವಿ ನಗರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. 8-10 ದಿನಗಳಿಗೊಮ್ಮೆ ನೀರು ಬಿಡುತ್ತಿದ್ದಾರೆ. ಇನ್ನು ಜಿಲ್ಲೆಯಾಧ್ಯಂತ ಹಲವು ಗ್ರಾಮಗಳಲ್ಲೂ ಜಲಕಂಟಕ ಎದುರಾಗಿದೆ.

ಬತ್ತಿದ ಕೆರೆ, ಬಿರುಕು ಬಿಟ್ಟ ಭೂಮಿ: ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿರುವ ಎರಡು ಕೆರೆಗಳು ಸಂಪೂರ್ಣ ಬತ್ತಿವೆ. ಕೆರೆ ಬತ್ತಿ ಭೂಮಿ ಬಿರುಕು ಬಿಟ್ಟಿದೆ. ಸುಮಾರು 12 ಎಕರೆಗೂ ಅಧಿಕ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಗಳು ಗ್ರಾಮಸ್ಥರ ಜೀವನಾಡಿ. ಇವು ಗ್ರಾಮದ ಸಾಕಷ್ಟು ಕೊಳವೆ ಬಾವಿ ಮತ್ತು ಬಾವಿಗಳಿಗೆ ಜೀವಸೆಲೆ ಆಗಿದ್ದವು. ಆದರೆ, ಈಗ ಕೆರೆ ಬತ್ತಿರುವ ಪರಿಣಾಮ ಸುತ್ತಲಿನ ಕೊಳವೆ ಬಾವಿ, ಬಾವಿಗಳು ಕೂಡ ಖಾಲಿ ಆಗಿವೆ. ಇವುಗಳನ್ನೇ ನಂಬಿ ಬೆಳೆದಿದ್ದ ಬೆಳೆಗಳು ಒಣಗುವ ಭೀತಿ ರೈತರಿಗೆ ಎದುರಾಗಿದೆ.

 

Leave a Reply

Your email address will not be published. Required fields are marked *

error: Content is protected !!