ಉದಯವಾಹಿನಿ, ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸುವ NEET UG ಪರೀಕ್ಷೆಯ ಕರ್ಮಕಾಂಡ ಮತ್ತೊಮ್ಮೆ ಬಯಲಾಗಿದೆ. ದೇಶದ ಅತಿದೊಡ್ಡ ಪ್ರವೇಶಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತೊಮ್ಮೆ ಸೋರಿಕೆಯಾಗಿದ್ದು, ಇತ್ತೀಚೆಗೆ ನಡೆಸಲಾಗಿದ್ದ ಪರೀಕ್ಷೆಯನ್ನೇ ರದ್ದು ಮಾಡಿ ಆದೇಶಿಸಲಾಗಿದೆ.
ಪರೀಕ್ಷೆಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಮೇ 3 ರಂದು ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದು ಮಾಡಿ, ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ) ಅಧಿಕೃತ ಆದೇಶದಲ್ಲಿ ತಿಳಿಸಿದೆ.

ಮಾದರಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳೇ ಪರೀಕ್ಷೆಯ ಮುಖ್ಯ ಪ್ರಶ್ನೆ ಪತ್ರಿಕೆಯಲ್ಲಿ ಇದ್ದವು. ಈ ಪತ್ರಿಕೆಗಳು ರಾಜಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಸೋರಿಕೆಯಾಗಿದ್ದವು. ಈ ಬಗ್ಗೆ ಆರೋಪಗಳು ಕೇಳಿಬಂದ ಬಳಿಕ ಮೇ 8 ರಂದು ಎನ್​ಟಿಎ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸ್ವತಂತ್ರ ಪರಿಶೀಲನೆಗೆ ಮನವಿ ಮಾಡಿತ್ತು. ತನಿಖಾ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ನೀಡಿದ ವರದಿಯನ್ನಾಧರಿಸಿ, ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಪರೀಕ್ಷೆಯನ್ನು ಇದೀಗ, ರದ್ದು ಮಾಡಲಾಗಿದೆ.

ಮೇ 3 ರಂದು ಸುಮಾರು 22 ಲಕ್ಷ ವಿದ್ಯಾರ್ಥಿಗಳು NEET UG 2026 ಪರೀಕ್ಷೆ ಬರೆದಿದ್ದರು. ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ನೀಟ್​ ಒಂದಾಗಿದ್ದು, ಈಗ ವಿಶ್ವಾಸಾರ್ಹತೆಯ ದೊಡ್ಡ ಬಿಕ್ಕಟ್ಟಿನಲ್ಲಿ ಮತ್ತೊಮ್ಮೆ ಸಿಲುಕಿದೆ.

ಸಿಬಿಐ ತನಿಖೆಗೆ ಆದೇಶ: ಲಕ್ಷಾಂತರ ವಿದ್ಯಾರ್ಥಿಗಳು ಈ ಅಕ್ರಮದಿಂದ ಬಾಧಿತರಾಗಿರುವ ಕಾರಣ, ಪ್ರಕರಣವನ್ನು ವಿವರವಾದ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಕೇಂದ್ರ ಸರ್ಕಾರ ಹಸ್ತಾಂತರಿಸಿದೆ. ಎನ್‌ಟಿಎ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತದೆ. ವಿಚಾರಣೆಗೆ ಅಗತ್ಯವಿರುವ ಎಲ್ಲ ದಾಖಲೆಗಳು, ಡಿಜಿಟಲ್ ಪುರಾವೆಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರದ್ದತಿಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಭವಿಷ್ಯದ ಪರೀಕ್ಷಾ ಪ್ರಕ್ರಿಯೆಯ ಬಗ್ಗೆಯೂ ಆತಂಕವಿದೆ. ಈ ಪರೀಕ್ಷೆ ರದ್ದು ಮಾಡಿದ್ದರೂ, ನೀಟ್ ಯುಜಿ 2026 ಅನ್ನು ಮತ್ತೆ ನಡೆಸುವುದಾಗಿ ಎನ್​ಟಿಎ ತಿಳಿಸಿದೆ. ಮರುಪರೀಕ್ಷೆಗೆ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ. ಸದಾಗಿ ಅರ್ಜಿ ಸಲ್ಲಿಸಬೇಕಿಲ್ಲ: ಮರುಪರೀಕ್ಷೆಗೆ ಹೊಸ ನೋಂದಣಿ ಅಗತ್ಯವಿಲ್ಲ. ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವೂ ನೀಡಬೇಕಾಗಿಲ್ಲ. ಈಗಾಗಲೇ ಪಾವತಿಸಿದ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುತ್ತದೆ. ಅಭ್ಯರ್ಥಿಗಳು ಮತ್ತೊಮ್ಮೆ ಹೊಸ ಅರ್ಜಿಗಳನ್ನೂ ಸಲ್ಲಿಸಬೇಕಿಲ್ಲ. ಅಸ್ತಿತ್ವದಲ್ಲಿರುವ ಅಭ್ಯರ್ಥಿಗಳ ದಾಖಲಾತಿಗಳು ಮತ್ತು ಅರ್ಜಿ ದಾಖಲೆಗಳನ್ನು ಮುಂದಿನ ಪರೀಕ್ಷೆಗೆ ಪರಿಗಣಿಸಲಾಗುವುದು ಎಂದು ಎನ್​ಟಿಎ ಎಕ್ಸ್​ ಖಾತೆಯಲ್ಲಿ ವಿವರ ನೀಡಿದೆ. ಮರು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗದಿರಲು, ಈ ಹಿಂದೆ ನಿಗದಿಪಡಿಸಲಾಗಿದ ಪರೀಕ್ಷಾ ಕೇಂದ್ರಗಳನ್ನೇ ಮಾನ್ಯ ಮಾಡಲಾಗಿದೆ. ಮರು ಪರೀಕ್ಷೆಯ ದಿನಾಂಕಕ್ಕೂ ಮೊದಲು ಹೊಸದಾಗಿ ಪ್ರವೇಶ ಪತ್ರಗಳನ್ನು ನೀಡಲಾಗುವುದು ಎಂದು ಪರೀಕ್ಷಾ ಮಂಡಳಿ ಹೇಳಿದೆ.

Leave a Reply

Your email address will not be published. Required fields are marked *

error: Content is protected !!