ಉದಯವಾಹಿನಿ, ಪಾಟ್ನಾ(ಬಿಹಾರ): ಕಾಡಾನೆಯೊಂದು ವ್ಯಕ್ತಿಯೊಬ್ಬನನ್ನು ತುಳಿದು ಕೊಂದು ಹಾಕಿದ ಘಟನೆ ಬಿಹಾರದ ನವಾಡಾ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ನಡೆದ ಮೂರನೇ ಘಟನೆ ಇದು.ಕವಕೋಲೆ ಬ್ಲಾಕ್‌ನ ಮಂಜಿಲಿ ಗ್ರಾಮದ ರಾಜಾರಾಮ್ ಪಾಸ್ವಾನ್ (55) ಎಂಬವರು ಕಾಡಾನೆ ದಾಳಿಯಿಂದ ಮೃತಪಟ್ಟವರು. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಹಳ್ಳಿಗೆ ನುಗ್ಗಿದ ಕಾಡಾನೆಯ ಹಿಂಡುಗಳಲ್ಲಿ ಒಂದು ಆನೆ, ರಾಜಾರಾಮ್ ಅವರು ಮನೆಯ ಹೊರಗೆ ಕುಳಿತಿದ್ದಾಗ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಸೊಂಡಿಲಿನಿಂದ ಎತ್ತಿ ನೆಲದ ಮೇಲೆ ಎಸೆದು ತುಳಿದು ಹಾಕಿದೆ. ಗ್ರಾಮದಲ್ಲಿ ಹಾನಿ ಕೂಡ ಮಾಡಿದೆ.ನಾವು ಗಂಡು ಆನೆಯನ್ನು ಜಾರ್ಖಂಡ್‌ನ ಕೊಡೆರ್ಮಾಕ್ಕೆ ಓಡಿಸಿ ಸೋಮವಾರ ರಾತ್ರಿಯಷ್ಟೇ ಅಲ್ಲಿನ ನಮ್ಮ ಸಹವರ್ತಿಗಳಿಗೆ ಒಪ್ಪಿಸಿದ್ದೆವು. ಅವರು ಅದನ್ನು ಸಮೀಪದ ಕಾಡಿಗೆ ಓಡಿಸಬೇಕಿತ್ತು. ಆದರೆ, ಅದು ಅವರಿಂದ ಹೇಗೋ ತಪ್ಪಿಸಿಕೊಂಡು ಬಂದು ದಾಳಿ ಮಾಡಿದೆ ಎಂದು ನವಾಡಾ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಶ್ರೇಷ್ಠ್ ಕುಮಾರ್ ಕೃಷ್ಣ ಈಟಿವಿ ಭಾರತಕ್ಕೆ ತಿಳಿಸಿದರು.

ರಾಜಾರಾಮ್ ಅವರ ದೇಹದ ತುಂಬೆಲ್ಲ ಗಂಭೀರ ಗಾಯಗಳಾಗಿದ್ದು, ಅವರನ್ನು ಗುರುತಿಸುವುದೇ ಕಷ್ಟವಾಗಿತ್ತು. ಬಳಿಕ ಧರಿಸಿದ ಬಟ್ಟೆಯಿಂದ ಮೇಲೆ ಗುರುತು ಹಿಡಿಯಲಾಗಿದೆ. ಮೃತರಿಗೆ ಅವಿವಾಹಿತ ಮೂವರು ಗಂಡು ಮಕ್ಕಳಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಮೃತರ ಸೋದರಳಿಯ ಆಗ್ರಹಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸುದ್ದಿ ತಿಳಿದು ಮಾಂಜಿಲಿ ಗ್ರಾಮಕ್ಕೆ ಭೇಟಿ ನೀಡಿದ ಡಿಎಫ್‌ಒ ಅಧಿಕಾರಿಗಳ ತಂಡ, ಆನೆಗಳು ಗ್ರಾಮದತ್ತ ಧಾವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸ್ಥಳೀಯರಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.ಈ ತಿಂಗಳಾರಂಭದಲ್ಲಿ, ನವಾಡಾ ಜಿಲ್ಲೆಯ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜೇತ್ಸಾರಿ ಗ್ರಾಮದಲ್ಲಿ ಆನೆಯೊಂದು ಬಚ್ಚು ರಾಮ್ ಎಂಬವರನ್ನು ಕೊಂದು ಹಾಕಿತ್ತು. ಬಿಹಾರದ ಕಾಡು ಪ್ರದೇಶದಲ್ಲಿ ಯಾವುದೇ ಆನೆಗಳಿಲ್ಲ. ಆದರೆ, ಕೆಲವೊಮ್ಮೆ ಅವು ನೆರೆಯ ಜಾರ್ಖಂಡ್, ನೇಪಾಳ ಮತ್ತು ಪಶ್ಚಿಮ ಬಂಗಾಳದಿಂದ ಬರುತ್ತವೆ. ಹೆಚ್ಚಿನ ಜನಸಂಖ್ಯಾ ಸಾಂದ್ರತೆಯಿಂದಾಗಿ ಮಾನವ – ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ಸರಾಸರಿ ಶೇ.22ರಷ್ಟು ಅರಣ್ಯ ಪ್ರದೇಶಕ್ಕೆ ಹೋಲಿಸಿದರೆ ರಾಜ್ಯವು ಕೇವಲ ಶೇ.8ರಷ್ಟು ಅರಣ್ಯ ಪ್ರದೇಶ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!