ಉದಯವಾಹಿನಿ, ನವದೆಹಲಿ: ನಾಸಿಕ್ನ ಟಿಸಿಎಸ್ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ದೌರ್ಜನ್ಯ ಪ್ರಕರಣದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗವು ತನ್ನ ತನಿಖೆಯನ್ನು ಮುಗಿಸಿದೆ. ಕೆಲಸದ ಸ್ಥಳದಲ್ಲಿ ಕಿರುಕುಳ, ಬೆದರಿಕೆ, ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿರುವ ಗಂಭೀರ ಆರೋಪಗಳನ್ನು ಆಯೋಗ ಮಾಡಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾತ್ಕರ್ ಅವರ ನಿರ್ದೇಶನದ ಮೇರೆಗೆ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಹಲವು ಮಹಿಳಾ ಉದ್ಯೋಗಿಗಳು ನೀಡಿದ ದೂರುಗಳ ಆಧಾರದ ಮೇಲೆ ಆಯೋಗವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿತ್ತು.
ಸತ್ಯಶೋಧನಾ ಸಮಿತಿಯು ನಾಸಿಕ್ ಘಟಕಕ್ಕೆ ಭೇಟಿ ನೀಡಿ, ದೂರುದಾರರು, ಲೈಂಗಿಕ ಕಿರುಕುಳ ತಡೆ ಕಾಯ್ದೆ (POSH) ಅಡಿಯಲ್ಲಿ ರಚಿಸಲಾದ ಆಂತರಿಕ ಸಮಿತಿಯ ಸದಸ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಾಕ್ಷಿಗಳೊಂದಿಗೆ ಸಮಾಲೋಚನೆ ನಡೆಸಿದೆ.
ಕಚೇರಿಯಲ್ಲಿ ಮಾನಸಿಕ ಕಿರುಕುಳ: ಆಯೋಗದ ಪ್ರಕಾರ, ನಾಸಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಅಧಿಕಾರದ ದುರುಪಯೋಗ, ಬೆದರಿಕೆ ಮತ್ತು ನಿರಂತರ ಮಾನಸಿಕ ಕಿರುಕುಳದಿಂದ ಕೂಡಿದ ಕೆಲಸದ ವಾತಾವರಣ ಅಲ್ಲಿತ್ತು ಎಂಬುದನ್ನು ಆಯೋಗ ಕಂಡುಕೊಂಡಿದೆ. ಕಚೇರಿಯ ಕೆಲವು ಆರೋಪಿ ವ್ಯಕ್ತಿಗಳು ನಾಸಿಕ್ ಕಚೇರಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ, ಅಸಹಾಯಕ ಯುವತಿಯರನ್ನು ಗುರಿಯಾಗಿಸಿಕೊಂಡು ಲೈಂಗಿಕ, ಭಾವನಾತ್ಮಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ವರದಿಯಲ್ಲಿ ತಿಳಿಸಿದೆ.
ಕೆಲಸದ ಸ್ಥಳದಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ಅವಹೇಳನ ಮಾಡುವಂತಹ ಕಾಮೆಂಟ್‌ಗಳನ್ನು ಮಾಡಲಾಗಿರುವ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಂತಹ ನಿರಂತರ ಧಾರ್ಮಿಕ ವಿರೋಧಿ ಹೇಳಿಕೆಗಳು ಕೆಲವು ಮಹಿಳಾ ಉದ್ಯೋಗಿಗಳಲ್ಲಿ ಭಯ ಮತ್ತು ಅಸಹಜ ಕೆಲಸದ ವಾತಾವರಣವನ್ನು ಸೃಷ್ಟಿಸಿವೆ ಎಂದು ಸಮಿತಿ ಗಮನಿಸಿದೆ. ಸಮಾಜಕ್ಕೆ ಹೆದರಿ, ವೃತ್ತಿಪರ ಹಿನ್ನಡೆ ಮತ್ತು ವಿಶ್ವಾಸಾರ್ಹ ಪರಿಹಾರ ವ್ಯವಸ್ಥೆಯ ಕೊರತೆಯಿಂದಾಗಿ ಹಲವು ಉದ್ಯೋಗಿಗಳು ದೂರು ನೀಡಲು ಹಿಂಜರಿಯುತ್ತಿದ್ದಾರೆ ಎಂದು ಆಯೋಗವು ವರದಿಯಲ್ಲಿ ತಿಳಿಸಿದೆ.
