ಉದಯವಾಹಿನಿ, ಭಾರತ ಮತ್ತು ಪಾಕ್ ನಡುವಿನ 3 ದಿನಗಳ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ಸಹಾಯವನ್ನು ನೀಡಿತ್ತು ಎಂದು ಚೀನಾದ ಅಧಿಕಾರಿಯೊಬ್ಬರು ಹೇಳಿದ್ದರು. ಈ ಮೂಲಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ನಿಂತಿದ್ದು ಬಹಿರಂಗವಾಗಿತ್ತು. ಇದಕ್ಕೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ. ಭಯೋತ್ಪಾದನೆಯನ್ನು ಹರಡುವ ದೇಶಗಳಿಗೆ ಬೆಂಬಲ ನೀಡುವುದು ತಮ್ಮ ಜಾಗತಿಕ ಸ್ಥಾನಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ತಮ್ಮನ್ನು ತಾವು ಜವಾಬ್ದಾರಿಯುತ ರಾಷ್ಟ್ರಗಳೆಂದು ಕರೆದುಕೊಳ್ಳುವ ದೇಶಗಳು ಯೋಚಿಸಬೇಕು ಎಂದು ಭಾರತ ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡಿದೆ ಎಂಬ ವರದಿಗಳಿಗೆ ಭಾರತ ಇಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾದಾಗ, ಭಾರತದೊಂದಿಗಿನ ಯುದ್ಧದ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ತಾಂತ್ರಿಕ ಬೆಂಬಲವನ್ನು ನೀಡಿದೆ ಎಂದು ಚೀನಾದ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದರು.
