ಉದಯವಾಹಿನಿ, ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಪ್ರಸ್ತುತ ಕನ್ನಡ ಹಾಗೂ ತುಳುವಿನಲ್ಲಿ ನಿರ್ಮಿಸಿರುವ ಚಿತ್ರ “ಪಿಚ್ಚರ್”. ಸಂದೀಪ ಬೆದ್ರ ನಿರ್ದೇಶನದ ಈ ಚಿತ್ರದ ನಾಯಕರಾಗಿ ನಿತ್ಯಪ್ರಕಾಶ್ ಬಂಟ್ವಾಳ್ ನಟಿಸಿದ್ದಾರೆ.
ಈ ಚಿತ್ರದ ವಿಶೇಷವೆಂದರೆ ನಿರ್ಮಾಪಕಿ ಶಿಲ್ಪಾ ಗಣೇಶ್ “ಗೋಕುಲದ ರಾಧೆ” ಎಂಬ ಹಾಡನ್ನು ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲೂ ಹಾಡಿದ್ದಾರೆ. ಈ ಮೂಲಕ ನಿರ್ಮಾಪಕಿಯಾಗಿದ್ದ ಶಿಲ್ಪಾ ಗಣೇಶ್ ಅವರು ಈಗ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಶಿಲ್ಪಾ ಗಣೇಶ್ ಹಾಗೂ ಜಸ್ಕರಣ್ ಸಿಂಗ್ ಈ ಹಾಡನ್ನು ಹಾಡಿದ್ದಾರೆ. ಕನ್ನಡದಲ್ಲಿ ಅರಸು ಅಂತಾರೆ ಹಾಗೂ ತುಳುವಿನಲ್ಲಿ ಕೀರ್ತನ್ ಭಂಡಾರಿ ಈ ಹಾಡನ್ನು ರಚಿಸಿದ್ದಾರೆ. ಸ್ಯಾಮ್ಯುಯೆಲ್ ಅಭಿ ಸಂಗೀತ ನೀಡಿದ್ದಾರೆ. ಕಾಶ್ಮೀರದಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
