ಉದಯವಾಹಿನಿ, ಭರತ್‌ಪುರ (ರಾಜಸ್ಥಾನ): ಜಿಲ್ಲೆಯ ಬಯಾನಾ ಶ್ರೇಣಿಯ ಬೆಟ್ಟಗಳಲ್ಲಿ ಇತ್ತೀಚೆಗೆ ನಡೆಸಲಾದ ವನ್ಯಜೀವಿ ಗಣತಿ ವೇಳೆ ಇದೇ ಮೊದಲ ಬಾರಿಗೆ ಅಳಿವಿನಂಚಿನಲ್ಲಿರುವ ನಾಲ್ಕು ಈಜಿಪ್ಟ್ ಬಿಳಿ ರಣಹದ್ದುಗಳು ಪತ್ತೆಯಾಗಿವೆ. ವಿಶ್ವದ ಅತ್ಯಂತ ಚಿಕ್ಕ ರಣಹದ್ದುಗಳಲ್ಲಿ ಒಂದಾದ ಈ ಪ್ರಭೇದವನ್ನು ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN)ವು ಅಳಿವಿನಂಚಿನಲ್ಲಿರುವ (ಹೆಚ್ಚಿನ ಅಪಾಯ) ವರ್ಗಕ್ಕೆ ಸೇರಿಸಿದೆ. ಈಗ ಇಲ್ಲಿನ ಅರಣ್ಯ ಇಲಾಖೆಯು ಬಯಾನಾ ಬೆಟ್ಟಗಳಲ್ಲಿ ಕ್ಯಾಮೆರಾ ಬಲೆಗಳನ್ನು ಅಳವಡಿಸುವ ಮೂಲಕ ಅವುಗಳ ಚಲನವಲನ, ಗೂಡುಕಟ್ಟುವ ಮಾದರಿ ಮತ್ತು ಅವುಗಳ ಸರಿಯಾದ ಸಂಖ್ಯೆಗಳನ್ನು ಅರಿಯಲು ತಯಾರಿ ನಡೆಸಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಈಜಿಪ್ಟ್ ರಣಹದ್ದು: ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸಂದೀಪ್ ಕುಮಾರ್ ಮಾತನಾಡಿ, ಈಜಿಪ್ಟ್ ರಣಹದ್ದು, ವಿಶ್ವದ ಅತ್ಯಂತ ಚಿಕ್ಕ ರಣಹದ್ದುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸತ್ತ ಪ್ರಾಣಿಗಳ ಮಾಂಸ ತಿನ್ನುವ ಮೂಲಕ ಅವುಗಳು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ನೀಡುತ್ತವೆ. ಬಯಾನಾ ಶ್ರೇಣಿಯ ಬೆಟ್ಟಗಳಲ್ಲಿ ಈ ಪ್ರಭೇದ ಕಂಡು ಬಂದಿದ್ದು ಇದೇ ಮೊದಲು. ಈಜಿಪ್ಟ್ ರಣಹದ್ದು ಬಿಳಿ ಬಣ್ಣದ್ದಾಗಿದ್ದು, ಹಳದಿ ಬಣ್ಣದ ತಲೆ ಮತ್ತು ಕುತ್ತಿಗೆಯನ್ನು ಹೊಂದಿದೆ. ಅದರ ಕೊಕ್ಕು ಕೂಡ ಕಪ್ಪು ಬಣ್ಣದ್ದಾಗಿದೆ. ಈ ಪ್ರಭೇದವು ಸಾಮಾನ್ಯವಾಗಿ ಗುಡ್ಡಗಾಡು ಮತ್ತು ಬಂಡೆಯಂತಹ ಪ್ರದೇಶಗಳನ್ನು ಹೆಚ್ಚಾಗಿರುತ್ತದೆ. ಎತ್ತರದ ಬಂಡೆಗಳ ಮೇಲೆ ಗೂಡುಗಳನ್ನು ನಿರ್ಮಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಳಿವಿನಂಚಿನಲ್ಲಿರುವ ಪ್ರಭೇದ: ಬಯಾನಾ ಶ್ರೇಣಿಯ ಹಿಂದಿನ ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯ ಇಲಾಖೆಯು ಈ ರಣಹದ್ದನ್ನು ಪತ್ತೆ ಹಚ್ಚಿದೆ. ಮೂರು ಗಂಡು ಮತ್ತು ಒಂದು ಹೆಣ್ಣು ಸೇರಿದಂತೆ ನಾಲ್ಕು ರಣಹದ್ದುಗಳು ಕಂಡುಬಂದಿವೆ. ಅಂತಾರಾಷ್ಟ್ರೀಯ ಸಂಸ್ಥೆ ಐಯುಸಿಎನ್ ಈಜಿಪ್ಟಿನ ರಣಹದ್ದನ್ನು ಅಳಿವಿನಂಚಿನಲ್ಲಿರುವ (ಹೆಚ್ಚಿನ ಅಪಾಯ) ವರ್ಗಕ್ಕೆ ಸೇರಿಸಿದೆ. ಇದರರ್ಥ ಸಂರಕ್ಷಣಾ ಪ್ರಯತ್ನಗಳನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ, ಭವಿಷ್ಯದಲ್ಲಿ ಈ ಪ್ರಭೇದವು ಗಂಭೀರ ಅಪಾಯಕ್ಕೆ ಸಿಲುಕಬಹುದು. ಅರಣ್ಯ ಇಲಾಖೆ ಈಗ ಈ ಪ್ರದೇಶದಲ್ಲಿ ವಿಶೇಷ ಸಂರಕ್ಷಣಾ ಕ್ರಮಗಳನ್ನು ಪ್ರಾರಂಭಿಸುತ್ತದೆ. ಈ ರಣಹದ್ದುಗಳಿರುವ ನೈಸರ್ಗಿಕ ಪರಿಸರದಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುವುದು. ಗುಡ್ಡಗಾಡು ಪ್ರದೇಶದಲ್ಲಿ ಅನಗತ್ಯ ಚಲನೆ, ಶಬ್ದ ಅಥವಾ ಇತರ ಅಡಚಣೆಗಳನ್ನು ನಿಯಂತ್ರಿಸುವತ್ತ ಗಮನ ಹರಿಸಲಾಗುವುದು. ಇದರಿಂದ ಅವು ಸುರಕ್ಷಿತ ಮತ್ತು ನೈಸರ್ಗಿಕ ಆವಾಸಸ್ಥಾನವನ್ನು ಹೊಂದಬಹುದು ಎಂದು ಕುಮಾರ್ ಹೇಳಿದ್ದಾರೆ.
ಈಜಿಪ್ಟ್ ರಣಹದ್ದುಗಳ ಗೂಡುಕಟ್ಟುವ ಕಾಲ ಫೆಬ್ರವರಿಯಿಂದ ಮೇ ವರೆಗೆ ಇರುತ್ತದೆ. ಈ ಪ್ರಭೇದವು ಕಲ್ಲಿನ ಬೆಟ್ಟಗಳು ಮತ್ತು ಬಂಡೆಗಳ ಮೇಲೆ ತನ್ನ ಗೂಡುಗಳನ್ನು ನಿರ್ಮಿಸುತ್ತದೆ. ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುತ್ತವೆ. ಭಾರತದಾದ್ಯಂತ, ಈ ಪ್ರಭೇದದ ಅಂದಾಜು ಸಂಖ್ಯೆ 15,000 ರಿಂದ 20,000ವರೆಗೆ ಇದೆ ಎಂದು ನಂಬಲಾಗಿದೆ. ಆದರೆ, ಇದು ವೇಗವಾಗಿ ಕ್ಷೀಣಿಸುತ್ತಿರುವ ರಣಹದ್ದು ಪ್ರಭೇದಗಳಲ್ಲಿ ಒಂದಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಕುಮಾರ್ ಹೇಳಿದ್ದಾರೆ.
