ಉದಯವಾಹಿನಿ, ಪುಣೆ(ಮಹಾರಾಷ್ಟ್ರ): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಪುಣೆ ಪೊಲೀಸರು ಬಂಧಿಸಿ, ಕೇಂದ್ರ ತನಿಖಾ ದಳ(ಸಿಬಿಐ)ಗೆ ಒಪ್ಪಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ಈ ಕುರಿತು ಮಾತನಾಡಿ, ಬಿಬ್ವೆವಾಡಿಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ನಾವು ಆಕೆಯನ್ನು ಪ್ರಶ್ನಿಸಿ ಹೆಚ್ಚಿನ ತನಿಖೆಗಾಗಿ ಸಿಬಿಐಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದರು.
ಮೇ 3ರಂದು ನಡೆದ ನೀಟ್–ಯುಜಿ 2026 ಪರೀಕ್ಷೆ ರದ್ದುಗೊಳಿಸಲು ಕಾರಣವಾದ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಈ ಮಹಿಳೆಯ ಪಾತ್ರವೇನು ಎಂಬುದರ ಕುರಿತು ಮಾಹಿತಿ ನೀಡಲು ಕುಮಾರ್ ನಿರಾಕರಿಸಿದ್ದಾರೆ.ಮತ್ತೊಂದೆಡೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸರು ಮಂಗಳವಾರ ಶಂಕಿತ ಆರೋಪಿಯನ್ನು ಬಂಧಿಸಿದ್ದರು.
“ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯುವಂತೆ ರಾಜಸ್ಥಾನ ಪೊಲೀಸರಿಂದ ಮನವಿ ಬಂತು. ಅದರಂತೆ, ನಾಸಿಕ್ ಪೊಲೀಸ್ ಅಪರಾಧ ವಿಭಾಗವು ಕಾರ್ಯಾಚರಣೆ ನಡೆಸಿ ಶಂಕಿತ ವ್ಯಕ್ತಿಯನ್ನು ಬಂಧಿಸಿದೆ. ರಾಜಸ್ಥಾನ ಪೊಲೀಸರ ತಂಡವು ಆರೋಪಿಯನ್ನು ವಶಕ್ಕೆ ಪಡೆಯಲು ನಾಸಿಕ್ಗೆ ಆಗಮಿಸುತ್ತಿದೆ” ಎಂದು ಪೊಲೀಸ್ ಉಪ ಆಯುಕ್ತ ಕಿರಣ್‌ಕುಮಾರ್ ಚೌಹಾಣ್ ತಿಳಿಸಿದ್ದರು. NEET UG ಪರೀಕ್ಷೆಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಪರೀಕ್ಷೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಮೇ 3 ರಂದು ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದು ಮಾಡಿ, ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅಧಿಕೃತ ಆದೇಶದಲ್ಲಿ ತಿಳಿಸಿದೆ.ಸಿಬಿಐ ತನಿಖೆಗೆ ಆದೇಶ: ಲಕ್ಷಾಂತರ ವಿದ್ಯಾರ್ಥಿಗಳು ಈ ಅಕ್ರಮದಿಂದ ಬಾಧಿತರಾಗಿರುವ ಕಾರಣ, ಪ್ರಕರಣವನ್ನು ವಿವರವಾದ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಕೇಂದ್ರ ಸರ್ಕಾರ ಹಸ್ತಾಂತರಿಸಿದೆ. ಎನ್‌ಟಿಎ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತದೆ. ವಿಚಾರಣೆಗೆ ಅಗತ್ಯವಿರುವ ಎಲ್ಲ ದಾಖಲೆಗಳು, ಡಿಜಿಟಲ್ ಪುರಾವೆಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರದ್ದತಿಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಭವಿಷ್ಯದ ಪರೀಕ್ಷಾ ಪ್ರಕ್ರಿಯೆಯ ಬಗ್ಗೆಯೂ ಆತಂಕವಿದೆ. ಈ ಪರೀಕ್ಷೆ ರದ್ದು ಮಾಡಿದ್ದರೂ, ನೀಟ್ ಯುಜಿ 2026 ಅನ್ನು ಮತ್ತೆ ನಡೆಸುವುದಾಗಿ ಎನ್‌ಟಿಎ ತಿಳಿಸಿದೆ.
