ಉದಯವಾಹಿನಿ, ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ವಾಷಿಂಗ್ಟನ್​​​ ನಿಂದ ಬೀಜಿಂಗ್​ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಪ್ರವಾಸದ ವೇಳೆ ಟ್ರಂಪ್​ ಅವರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿ, ಪರಸ್ಪರ ಸುಂಕಗಳ ಬಗ್ಗೆ ಹಾಗೂ ವ್ಯಾಪಾರ ಸಂಬಂಧಗಳನ್ನು ಸುಗಮಗೊಳಿಸುವ ಬಗ್ಗೆ ಚರ್ಚಿಸಲಿದ್ದಾರೆ.
ಚೀನಾ ಪ್ರವಾಸ ಆರಂಭಿಸುವ ಮುನ್ನ ಮಾತನಾಡಿದ ಡೊನಾಲ್ಡ್ ಟ್ರಂಪ್​, ನಾವು ಅಧ್ಯಕ್ಷ ಕ್ಸಿ ಅವರೊಂದಿಗೆ ಹಲವು ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಲಿದ್ದೇವೆ. ಅದರಲ್ಲೂ ವಿಶೇಷವಾಗಿ ನಾವು ವ್ಯಾಪಾರ ಅಭಿವೃದ್ಧಿ ಮತ್ತು ಪರಸ್ಪರ ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಸಮಾಲೋಚಿಸಲಿದ್ದೇವೆ ಎಂದು ತಿಳಿಸಿದ್ದಾರೆ.ಕ್ಸಿ ನನ್ನ ಸ್ನೇಹಿತ, ಅವರು ನಮ್ಮೊಂದಿಗೆ ಹೊಂದಿಕೊಳ್ಳುವ ವ್ಯಕ್ತಿ ಕೂಡಾ ಹೌದು. ಇದು ಬಹಳ ರೋಮಾಂಚಕಾರಿ ಪ್ರವಾಸವಾಗಲಿದೆ. ಬಹಳಷ್ಟು ಒಳ್ಳೆಯ ಫಲಿತಾಂಶಗಳು ಹೊರಬೀಳುವ ಬಗ್ಗೆ ಆಶಾವಾದಿಯಾಗಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ನಾವು ಪಶ್ಚಿಮ ಏಷ್ಯಾ ಉದ್ವಿಗ್ನತೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಿದ್ದೇವೆ. ಚೀನಾ ಅಧ್ಯಕ್ಷ ಕ್ಸಿ ಒಳ್ಳೆಯವರಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗೂ ನಾವು ಪರಸ್ಪರ ಚರ್ಚಿಸಲು ಬಹಳಷ್ಟು ವಿಷಯಗಳಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇರಾನ್ ವಿಚಾರ ಅವುಗಳಲ್ಲಿ ಒಂದು ಎಂದು ನಾನು ಹೇಳಲು ಬಯಸುವುದಿಲ್ಲ. ಏಕೆಂದರೆ ಈಗಾಗಲೇ ನಾವು ಇರಾನ್ ವಿರುದ್ಧ ಗೆಲುವು ಸಾಧಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ.

ಇರಾನ್ ವಿಚಾರದಲ್ಲಿ ನಮಗೆ ಯಾವುದೇ ಸಹಾಯದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಒಂದಲ್ಲ ಒಂದು ರೀತಿಯಲ್ಲಿ ಗೆಲ್ಲುತ್ತೇವೆ. ಈಗಾಗಲೇ ಅವರ ನೌಕಾಪಡೆ, ವಾಯುಪಡೆಯನ್ನು ಪುಡಿಗಟ್ಟಿದ್ದೇವೆ. ಅವರು ಯುದ್ಧದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು ಟ್ರಂಪ್​ ಹೇಳಿದ್ದಾರೆ. ಏರ್ ಫೋರ್ಸ್ ಒನ್‌ನಲ್ಲಿ ಟ್ರಂಪ್ ಬೀಜಿಂಗ್​ ಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಜೊತೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರುಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಯುಎಸ್ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್, ಎರಿಕ್ ಟ್ರಂಪ್ ಮತ್ತು ಲಾರಾ ಟ್ರಂಪ್ ಇತರರು ಇದ್ದಾರೆ. ಟ್ರಂಪ್ ಭೇಟಿಯ ಸಮಯದಲ್ಲಿ ಅಮೆರಿಕದ ಉನ್ನತ ಕಂಪನಿಗಳ ಸಿಇಒಗಳ ದೊಡ್ಡ ನಿಯೋಗವೂ ಬೀಜಿಂಗ್‌ನಲ್ಲಿರುತ್ತದೆ. ಈ ಸಂಬಂಧ ದೊಡ್ಡ ಉದ್ಯಮಿಗಳಾದ, ಎಲೋನ್ ಮಸ್ಕ್ (ಟೆಸ್ಲಾ), ಟಿಮ್ ಕುಕ್ (ಆಪಲ್), ಲ್ಯಾರಿ ಫಿಂಕ್ (ಬ್ಲ್ಯಾಕ್‌ರಾಕ್), ಮತ್ತು ಕೆಲ್ಲಿ ಆರ್ಟ್‌ಬರ್ಗ್ (ಬೋಯಿಂಗ್) ಸೇರಿದಂತೆ ಉನ್ನತ ಸಿಇಒಗಳನ್ನು ಶ್ವೇತಭವನ ಆಹ್ವಾನಿಸಿದೆ

Leave a Reply

Your email address will not be published. Required fields are marked *

error: Content is protected !!