ಉದಯವಾಹಿನಿ, ಚೆನ್ನೈ (ತಮಿಳುನಾಡು): ಸರ್ಕಾರಿ ನೌಕರರು ಮತ್ತು ಶಿಕ್ಷಕರ ತುಟ್ಟಿ ಭತ್ಯೆಯನ್ನು ಶೇಕಡಾ 2 ರಷ್ಟು ಹೆಚ್ಚಿಸಿ ತಮಿಳುನಾಡು ಸರ್ಕಾರ ಆದೇಶಿಸಿದೆ. ಚುನಾವಣೆಗೂ ಮೊದಲು ಟಿವಿಕೆ ಪಕ್ಷದ ಸಂಸ್ಥಾಪಕ, ಸಿಎಂ ವಿಜಯ್​ ಅವರು ನೀಡಿದ ಭರವಸೆಯನ್ನು ಪೂರೈಸಿದ್ದಾರೆ.
ಈ ಪರಿಷ್ಕರಣೆಯೊಂದಿಗೆ ಸರ್ಕಾರಿ ನೌಕರರ ತುಟ್ಟಿ ಭತ್ಯೆಯು ಈಗ ಶೇಕಡಾ 58 ರಿಂದ ಶೇ. 60 ಕ್ಕೆ ಏರಿದೆ. ಇದು ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರಕ್ಕೆ ವಾರ್ಷಿಕವಾಗಿ 1,230 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ.
ನೌಕರರ ಕಲ್ಯಾಣಕ್ಕೆ ಸರ್ಕಾರ ಬದ್ಧ: ಸರ್ಕಾರವು ಅಗತ್ಯವಿರುವ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡುತ್ತದೆ. ಸರ್ಕಾರಿ ನೌಕರರು, ಶಿಕ್ಷಕರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರ ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ಮೆರೆಯುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ಸಿಎಂ ವಿಜಯ್ ನೇತೃತ್ವದ ಸರ್ಕಾರವು, ಜನರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ರೂಪಿಸಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಶಿಕ್ಷಕರು ವಿವಿಧ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ಅವುಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವಿಜಯ್​ರಿಂದ ಮೂರನೇ ಭರವಸೆ ಅನುಷ್ಠಾನ: ಚುನಾವಣೆಗೂ ಮೊದಲು ನಾನಾ ಭರವಸೆ ನೀಡಿದ್ದ ಸಿಎಂ ವಿಜಯ್ ತಾವು ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಮೂರು ದೊಡ್ಡ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ 200 ಯುನಿಟ್​ವರೆಗೆ ಉಚಿತ ವಿದ್ಯುತ್​ ನೀಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಮೊದಲ ಬೇಡಿಕೆಯನ್ನು ಈಡೇರಿಸಿದ್ದರು.ಬಾರ್​​ಗಳನ್ನು ಬಂದ್​ ಮಾಡಿ ಆದೇಶ: ಅದಾದ ಬಳಿಕ, ದೇವಸ್ಥಾನಗಳು, ಪೂಜಾ ಮಂದಿರಗಳು, ಆಸ್ಪತ್ರೆ, ಬಸ್​ ನಿಲ್ದಾಣ, ಆಸ್ಪತ್ರೆಗಳ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಿ ದೊಡ್ಡ ನಿರ್ಧಾರ ಕೈಗೊಂಡಿದ್ದರು. ಜೊತೆಗೆ, ಹೆಣ್ಣುಮಕ್ಕಳ ಸುರಕ್ಷತೆಗಾಗಿ ಸಿಂಗ ಪೆಣ್​ ಎಂಬ ಸುರಕ್ಷತಾ ಕ್ರಮವನ್ನು ಜಾರಿಗೆ ತಂದಿದ್ದರು. ಅದನ್ನು ರಾಜ್ಯದೆಲ್ಲೆಡೆ ಅನುಷ್ಠಾನಕ್ಕೆ ಸೂಚಿಸಿದ್ದರು. ಇದೀಗ, ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ಮೂಲಕ ತಾವು ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸುವತ್ತ ದಾಪುಗಾಲು ಇಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!