ಉದಯವಾಹಿನಿ, ಚೀನಾ
: ಚೀನಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಐತಿಹಾಸಿಕ ಮಳೆ ಹಾಗೂ ಪ್ರವಾಹದಿಂದ ದೇಶ ಬಹುತೇಕ ತತ್ತರಿಸಿದೆ. ಭಾರೀ ಮಳೆ ಮತ್ತು ಈಶಾನ್ಯ ಚೀನಾದಲ್ಲಿ ಉಕ್ಕೇರಿ ಹರಿಯುತ್ತಿರುವ ನದಿಗಳ ನೀರಿನಿಂದಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಬೀಜಿಂಗ್ ನಗರವನ್ನು ಮೂರು ಕಡೆಗಳಿಂದ ಸುತ್ತುವರಿದಿರುವ ಹೆಬೆಯ್ ಪ್ರಾಂತದ ಹಲವು ನಗರಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಉತ್ತರ ಚೀನಾದ ಹಿಲಾಂಗ್‌ಜಿಯಾಂಗ್ ಪ್ರಾಂತದ ಒಂದು ಹಳ್ಳಿಯ ಎಲ್ಲಾ ಜನರನ್ನೂ ಸ್ಥಳಾಂತರಿಸಲಾಗಿದೆ. ಕಳೆದ ವಾರಾಂತ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೀಜಿಂಗ್ ಹಾಗೂ ಅದರ ಪಕ್ಕದ ನಗರಗಳಲ್ಲಿ ಪ್ರವಾಹದಿಂದ ಕನಿಷ್ಟ ೨೦ ಮಂದಿ ಮೃತಪಟ್ಟಿದ್ದು ಇತರ ೨೭ ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
