ಉದಯವಾಹಿನಿ, ವಾಷಿಂಗ್ಟನ್: ಅಮೆರಿಕಾದ ಪ್ರಮುಖ ಆಸ್ಪತ್ರೆಗಳ ಮೇಲೆ ಭಾರೀ ಪ್ರಮಾಣದ ಸರಣಿ ಸೈಬರ್ ದಾಳಿ ನಡೆಸಲಾಗಿದ್ದು, ಅಲ್ಲೋಲ ಕಲ್ಲೋಲದ ಸ್ಥಿತಿ ಸೃಷ್ಟಿಯಾಗಿದೆ. ಸೈಬರ್ ದಾಳಿ ಹಿನ್ನೆಲೆಯಲ್ಲಿ ಹಲವು ದೊಡ್ಡ ದೊಡ್ಡ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಕೋಣೆಗಳನ್ನು ಮುಚ್ಚಲಾಗಿದ್ದು, ಅಲ್ಲದೆ ಆಂಬ್ಯುಲೆನ್ಸ್‌ಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ. ಸದ್ಯ ಸೈಬರ್ ದಾಳಿಗೆ ಯಾರು ಅಥವಾ ಯಾವ ಗುಂಪು ಹೊಣೆಯಾಗಿದೆ ಎಂಬುದು ಇನ್ನೂ ತಿಳಿದು
ಬಂದಿಲ್ಲ.
ಸದ್ಯ ಜಾಗತಿಕ ಮಟ್ಟದಲ್ಲಿ ಯುದ್ದ ನಡೆಸುವ ನೀತಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಕೇವಲ ಶಸ್ತ್ರಾಸ್ತ್ರದಿಂದಲೇ ನಡೆಸಲಾಗುತ್ತಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲದೆ ಸೈಬರ್ ದಾಳಿಗಳ ಮೂಲಕವೂ ಶತ್ರು ದೇಶಕ್ಕೆ ಹಾನಿ ಉಂಟುಮಾಡುವ ಕಾರ್ಯ ಸದ್ಯ ಎಲ್ಲೆಡೆ ನಡೆಯುತ್ತಿದೆ. ಅದರಂತೆ ಇದೀಗ ಅಮೆರಿಕಾದ ಆಸ್ಪತ್ರೆಗಳ ಮೇಲೆ ಸೈಬರ್ ದಾಳಿ ನಡೆಸಲಾಗಿದೆ. ಆಸ್ಪತ್ರೆಗಳ ಆಡಳಿತ ಮಂಡಳಿಯು ಸೈಬರ್ ಹಾನಿಯ ಪ್ರಮಾಣವನ್ನು ನಿರ್ಧರಿಸಲು ಕೆಲಸ ಮಾಡುತ್ತಿರುವುದರಿಂದ ಅನೇಕ ಪ್ರಾಥಮಿಕ ಆರೈಕೆ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕನೆಕ್ಟಿಕಟ್, ಪೆನ್ಸಿಲ್ವೇನಿಯಾ, ರೋಡ್ ಐಲ್ಯಾಂಡ್ ಮತ್ತು ಟೆಕ್ಸಾಸ್‌ನಲ್ಲಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳನ್ನು ಹೊಂದಿರುವ ಲಾಸ್ ಏಂಜಲೀಸ್ ಮೂಲದ ಪ್ರಾಸ್ಪೆಕ್ಟ್ ಮೆಡಿಕಲ್ ಹೋಲ್ಡಿಂಗ್ಸ್ ತನ್ನ ಕಂಪ್ಯೂಟರ್ ಸಿಸ್ಟಮ್‌ಗಳನ್ನು ರಾನ್ಸನ್‌ವೇರ್ (ಅಪಾಯಕಾರಿ ಬಗ್)ನಿಂದ ಹ್ಯಾಕ್ ಮಾಡಲಾಗಿದೆ.
