ಉದಯವಾಹಿನಿ, ನ್ಯೂಯಾರ್ಕ್: ದಕ್ಷಿಣ ಕೊರಿಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಸ್ಕೌಟ್ ಜಾಂಬೂರಿ ಆಯೋಜನೆ ಇದೀಗ ವಿಪರೀತ ತಾಪಮಾನದ ಪರಿಣಾಮ ತೂಗುಯ್ಯಾಲೆಯಲ್ಲಿನ ಸ್ಥಿತಿಯಲ್ಲಿದೆ. ತೀವ್ರತರವಾದ ತಾಪಮಾನ ಹಾಗೂ ಪ್ರತಿಕೂಲ ಹವಾಮಾನದ ಪರಿಣಾಮ ಈಗಾಗಲೇ ಅಮೆರಿಕಾ, ಸಿಂಗಾಪೂರ್, ಬ್ರಿಟನ್ ಮುಂತಾದ ದೇಶಗಳು ತಮ್ಮ ತಮ್ಮ ಮಕ್ಕಳನ್ನು ಜಾಂಬೂರಿಯಿಂದ ಹಿಂದಕ್ಕೆ ಕರೆಸಿಕೊಂಡಿದೆ. ಹೀಗಾಗಿ ಜಾಂಬೂರಿಯನ್ನೇ ರದ್ದುಗೊಳಿಸಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ.
ದಕ್ಷಿಣ ಕೊರಿಯಾದ ಪಶ್ಚಿಮ ಕರಾವಳಿಯ ಬುವಾನ್ ನಗರದ ಸಮೀಪವಿರುವ ಸೇಮಾಂಗೇಮ್‌ನಲ್ಲಿ ತಾಪಮಾನವು ೩೪ ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಸದ್ಯ ಇಲ್ಲಿ ೧೪ರಿಂದ ೧೮ರ ಹರೆಯದ ಸುಮಾರು ೩೯,೦೦೦ ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ಭಾಗವಹಿಸಿದ್ದು, ಕ್ಯಾಂಪಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ನಿರತರಾಗಿದ್ದಾರೆ. ಈ ನಡುವೆ ಪ್ರತಿಕೂಲ ತಾಪಮಾನದ ಪರಿಣಾಮ ಶನಿವಾರ ಅಮೆರಿಕಾ ತಂಡಗಳು ಜಾಂಬೂರಿಯಲ್ಲಿ ಪಾಲ್ಗೊಳ್ಳುವುದರಿಂದ ಹಿಂದೆಸರಿದಿರುವುದು ಸ್ಪರ್ಧೆ ಆಯೋಜಕರಿಗೆ ದೊಡ್ಡ ಹಿನ್ನಡೆ ಎಂದೇ ಬಿಂಬಿಸಲಾಗಿದೆ. ಅದೂ ಅಲ್ಲದೆ ಸಿಂಗಾಪೂರ್, ಬ್ರಿಟನ್ ಮುಂತಾದ ದೇಶಗಳು ಕೂಡ ಅಮೆರಿಕಾದ ಹಾದಿಯನ್ನೇ ಅನುಸರಿಸಿದೆ.
