
ಉದಯವಾಹಿನಿ,ಢಾಕಾ: 46 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮರಳು ತುಂಬಿದ ಹಡಗಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಮಂದಿ ಸಾವಿಗೀಡಾಗಿರುವ ಘಟನೆ ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ ನಡೆದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ಮುನ್ಷಿ ಗಂಜ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಲೌಹಾಜಂಗ್‌ನ ಅಗ್ನಿಶಾಮಕ ಕೇಂದ್ರದ ಅಧಿಕಾರಿ ಖಯಾಸ್ ಅಹ್ಮದ್ ತಿಳಿಸಿದ್ದಾರೆ.ಈವರೆಗೆ 8 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ’ಎಂದು ಅಹ್ಮದ್ ಹೇಳಿದ್ದಾರೆ.
ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿ ನದಿಯಲ್ಲಿ ನಿಂತಿದ್ದ ಬೋಟ್ ಭಾನುವಾರ ಬೆಳಗಿನ ಜಾವ ನಾಪತ್ತೆಯಾದ ಬಳಿಕ ಅಗ್ನಿಶಾಮಕ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿತ್ತು.ಸಿರಾಜ್ ದಿಖಾನ್ ಪ್ರದೇಶದ ಜನರು ಬೋಟ್‌ನಲ್ಲಿ ದಿನವಿಡೀ ಪಿಕ್‌ನಿಕ್‌ಗೆ ತೆರಳಿದ್ದರು ಎಂದು ಮುನ್ಷಿ ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಅಸ್ಲಾಂ ಖಾನ್ ಹೇಳಿದ್ದಾರೆ. ಅದರಲ್ಲಿ ಬಹುತೇಕರು ಈಜಿ ದಡ ಸೇರಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
