ಉದಯವಾಹಿನಿ, ಅವ್ಯಕ್ತ ಪ್ರೇಮ… ಬಹಳ ಜನರಿಗೆ ಇದೊಂದು ಹೊಸ ಶಬ್ದ ಅನ್ನಿಸಬಹುದು. ಸಾಹಿತ್ಯ ಭಂಡಾರದಲ್ಲಿ ಆಗಾಗ ಮಾತ್ರ ಇಣುಕುವ ಪದವಷ್ಟೇ ಅನ್ನಿಸಬಹುದು. ಆದರೆ ಹಾಗೇನಿಲ್ಲ. ಈ ಶಬ್ದದ ಪರಿಚಯ ಅದೆಷ್ಟು ಜನರಿಗೆ ಇದೆಯೋ
, ಆದರೆ ಆ ಭಾವ ನಮ್ಮೆಲ್ಲರಿಗೂ ಪರಿಚಿತವೇ.
ಅವ್ಯಕ್ತ ಪ್ರೇಮ ಅಂದರೆ ಒಬ್ಬರಿಗೊಬ್ಬರು ಹೇಳಿಕೊಳ್ಳದ ಅಥವಾ ಹೇಳಿಕೊಳ್ಳಲಾಗದ ಪ್ರೀತಿ. ಆಹಾ… ಕೇಳುವುದಕ್ಕೆ ಅದೆಷ್ಟು ಚಂದ.. ಆ ಭಾವವೂ ಹಾಗೆಯೇ ಅದರ ಮುಂದೆ ಜಗತ್ತಿನ ಸುಖಗಳೆಲ್ಲ ಯಾವುದೂ ಇಲ್ಲ. ಅವ್ಯಕ್ತ ಪ್ರೇಮ ಭಾರತೀಯ ಪರಂಪರೆಯ ಸಂಕೇತವೂ ಹೌದು. ನಾವು ಅತ್ಯಂತ ಇಷ್ಟಪಡುವ ರಾಧಾ-ಕೃಷ್ಣರ ಮಧ್ಯೆ ಇದ್ದದ್ದೂ ಇದೇ ಅವ್ಯಕ್ತ ಪ್ರೇಮ. ಮಾತುಗಳು ಮೌನವಾಗಿ ಕೇವಲ ಮನಸ್ಸುಗಳು ಮಾತ್ರ ಮಾತನಾಡುವುದೇ ನಿಜವಾದ ಪ್ರೀತಿ. ಅಲ್ಲವೇ? ಇಲ್ಲೂ ಹಾಗೆ ಮಾತಿಗೆ ಬೆಲೆ ಇಲ್ಲ. ಒಬ್ಬರಿಗೊಬ್ಬರ ಮನಸ್ಸು ಬೆಸೆದು ಅವುಗಳ ಪ್ರತಿಫಲನವನ್ನು ಕಣ್ಣು ಸೆರೆಹಿಡಿದುಕೊಳ್ಳಲಾಗದೆ ಹೊರಸೂಸಿಬಿಡುತ್ತದೆ. ಅಲ್ಲಿ ಸುಂದರವಾದ ಮಾತುಗಳು, ಅಪೇಕ್ಷೆಯೇ ಇಲ್ಲದ ಸಿಟ್ಟು- ಕಾದಾಟಗಳು, ಒಬ್ಬರಿಗೊಬ್ಬರ ಮೇಲೆ ನಿಷ್ಕಲ್ಮಷ ಅಸೂಯೆ. ನನ್ನವನು ಯಾರೊಂದಿಗೋ ಮಾತನಾಡುತ್ತಿದ್ದರೆ ನನ್ನನ್ನು ಬಿಟ್ಟು ಹೋಗುವನೋ ಎಂಬ ಭಯ. ಅಲ್ಲಿ ಒಳ್ಳೆಯದಲ್ಲದ ಮತ್ತೊಂದಕ್ಕೆ ಬೆಲೆಯಿಲ್ಲ. ಅಲ್ಲಿ ಕಾಮದ ವಾಸನೆ ಇಲ್ಲ. ಸಲ್ಲದ ಭಾವನೆ ಇಲ್ಲ. ನನ್ನ ಭಾವನೆಯನ್ನು ತೋಡಿಕೊಂಡರೆ ಎಲ್ಲಿ ನನ್ನ ಬಿಟ್ಟು ಹೋಗುವನೋ/ಹೋಗುವಳೋ ಎಂಬ ಭಯ. ಇಲ್ಲಿರುವ ಭಯವೇ ಭಯಕ್ಕೆ ಜಗತ್ತಿನ ಏಕಮಾತ್ರ ಉದಾಹರಣೆ.
