ಉದಯವಾಹಿನಿ, ಹವಾಯಿ : ಹವಾಯಿಯ ಇತಿಹಾಸ ಕಂಡುಕೇಳದ ರೀತಿಯಲ್ಲಿ ಭಾರೀ ಕಾಡ್ಗಿಚ್ಚಿನಿಂದ ಸದ್ಯ ಇಲ್ಲಿನ ಸ್ಥಿತಿ ತೀರಾ ಹದಗೆಟ್ಟಿದ್ದು, ಜನರ ಆಸ್ತಿ-ಪಾಸ್ತಿ ಸೇರಿದಂತೆ ಆರ್ಥಿಕತೆಗೆ ಭಾರೀ ಹೊಡೆದ ಬಿದ್ದಿದೆ. ಸದ್ಯ ಇಲ್ಲಿನ ಮಾಯಿ ಪ್ರದೇಶದ ಲಹೈನಾ ಬಹುತೇಕ ಸುಟ್ಟು ಹೋಗಿದ್ದು, ಪರಿಹಾರ ಕಾರ್ಯ ಭರದಿಂದ ಸಾಗುವ ಅವತ್ಯವಿದೆ. ಈ ನಡುವೆ ಮೃತರ ಸಂಖ್ಯೆ ೬೭ಕ್ಕೆ ಏರಿಕೆಯಾಗಿದ್ದು, ೧೦೦ಕ್ಕೂ ಹೆಚ್ಚಿನ ಮಂದಿ ನಾಪತ್ತೆಯಾಗಿದ್ದಾರೆ. ಈ ನಡುವೆ ಹವಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿರುವ ಲಹೈನಾ ಜನತೆಗೆ ಶುಕ್ರವಾರ ತಮ್ಮ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲು ಅವಕಾಶ ನೀಡಲಾಗಿದೆ. ಈ ನಂತರ ಇಲ್ಲಿನ ಹೆಚ್ಚಿನ ಹಾನಿಯ ಬಗ್ಗೆ ತಿಳಿದು ಬಂದಿದೆ. ಈ ವೇಳೆ ಪರಿಶೀಲನೆಯ ವೇಳೆ
ಇಡೀ ಲಹೈನಾ ನಗರವೇ ಹೊತ್ತಿ ಉರಿದಿರುವುದು ಬೆಳಕಿಗೆ ಬಂದಿದ್ದು, ಇತಿಹಾಸದಲ್ಲೇ ಅತ್ಯಂತ ರೌದ್ರ ಕಾಡ್ಗಿಚ್ಚಿಗೆ ಸಾಕ್ಷಿಯಾಗಿದೆ ಎನ್ನಲಾಗಿದೆ. ಲಹೈನಾದಲ್ಲಿ ವಾಸಿಸುವ ಕುರಿತಂತೆ ಸೂಕ್ತ ದಾಖಲೆಗಳೊಂದಿಗೆ ತೆರಳಲು ಇಲ್ಲಿನ ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಅವಘಡದ ಪರಿಣಾಮ ಹೆಚ್ಚಿನ ನಾಗರಿಕರು ದಾಖಲೆಗಳನ್ನು ಕಳೆದುಕೊಂಡಿದ್ದು, ಹೆಚ್ಚಿನ ಮಂದಿ ಭೇಟಿ ನೀಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಲಹೈನಾ ಕೇಂದ್ರ ಸ್ಥಾನ ಹೊಂದಿರುವ ಮಾಯಿ ಪ್ರದೇಶದಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಾರ್ಯಗತವಾಗಿಲ್ಲ. ಅಲ್ಲದೆ ನೀರಿನ ಪೂರೈಕೆ ಕೂಡ ಸಮರ್ಪಕಗೊಂಡಿಲ್ಲ. ಇಲ್ಲಿನ ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ಶೋಧ ಸಿಬ್ಬಂದಿ ಇನ್ನೂ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಇದುವರೆಗೆ ಪಟ್ಟಣದ ಬಂದರಿನ ಬಳಿ ನೀರಿನಿಂದ ೧೭ ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಸದ್ಯ ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
