ಉದಯವಾಹಿನಿ,ಧರ್ಮಶಾಲಾ: ಅಂತರರಾಷ್ಟ್ರೀಯ ಕೈದಿಗಳ ನ್ಯಾಯ ದಿನದಂದು, ಟಿಬೆಟ್ಟಿನ ರಾಜಕೀಯ ಕೈದಿಗಳ ವಿರುದ್ಧ ಚೀನಾದ ಅನ್ಯಾಯ , ದೌರ್ಜನ್ಯ, ದಬ್ಬಾಳಿಕೆಯನ್ನು ತೀವ್ರವಾಗಿ ಪ್ರತಿಭಟಿಸಿ ಸ್ಟೂಡೆಂಟ್ಸ್ ಫಾರ್ ಫ್ರೀ ಟಿಬೆಟ್ ಇಂಡಿಯಾ , ಟಿಬೆಟಿಯನ್ ವುಮೆನ್ಸ್ ಅಸೋಸಿಯೇಷನ್ ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಟಿಬೆಟ್ ಸೇರಿದಂತೆ ಮೂರು ಟಿಬೆಟಿಯನ್ ಎನ್‌ಜಿಒಗಳು ಜಂಟಿಯಾಗಿ ಮೇಣದಬತ್ತಿಯ ಜಾಗರಣೆ ಕಾರ್ಯಕ್ರಮ ಆಯೋಜಿಸಿದ್ದವು.
ಟಿಬೆಟ್‌ನಲ್ಲಿ ಅಸಂಖ್ಯಾತ ರಾಜಕೀಯ ಕೈದಿಗಳು ಅನುಭವಿಸಿದ ಮೂಲಭೂತ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಘೋರ ಉಲ್ಲಂಘನೆಗಳ ವಿರುದ್ಧ ಟಿಬೆಟಿಯನ್ ಕಾರ್ಯಕರ್ತರು ನ್ಯಾಯಕ್ಕಾಗಿ ಧ್ವನಿ ಎತ್ತಿ ಈ ಪ್ರತಿಭಟನೆ ನಡೆಸಿದರು.
ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಭಾವ ಚಿತ್ರವನ್ನು ಹಿಡಿದು ಟಿಬೆಟ್‌ನಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡುವಂತೆ ಕರೆ ನೀಡಿದರು.
ನ್ಯಾಶನಲ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷರಾದ ತಾಶಿ ಧೋಂಡಪ್ ಅವರು ಮಾತನಾಡಿ ಟಿಬೆಟ್‌ನಲ್ಲಿನ ಕಾರಾಗೃಹಗಳನ್ನು ಪರೀಕ್ಷಿಸಲು ತಂಡವನ್ನು ಕಳುಹಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು. ಟಿಬೆಟಿಯನ್ ಸ್ವಾಯತ್ತ ಪ್ರದೇಶದಲ್ಲಿ (ಟಿಎಆರ್) ಕಾರಾಗೃಹಗಳ ಸಂಖ್ಯೆ ಈಗ ೭೯ ತಲುಪಿದೆ ಎಂದು ಅವರು ಹೇಳಿದರು.
