ಉದಯವಾಹಿನಿ ಕುಶಾಲನಗರ : ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್.ಪವನ್‌ಕುಮಾರ್ ಅವರು ಅನೀರಿಕ್ಷಿತವಾಗಿ ಭೇಟಿ ನೀಡಿ ವೀಕ್ಷಿಸಿದರು.ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಚೀಟಿಗಾಗಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರನ್ನು ಗಮನಿಸಿದ ಲೋಕಾಯುಕ್ತ ಡಿವೈಎಸ್‌ಪಿ ಅವರು ಹೆಚ್ಚಿನ ಕೌಂಟರ್ ತೆರೆಯುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.
ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಪ್ರತೀ ನಿತ್ಯ ಸಾರ್ವಜನಿಕರು ಔಷಧಿ ಪಡೆಯಲು ಬರುತ್ತಾರೆ. ಸೂಕ್ತ ಚಿಕಿತ್ಸೆ ಮತ್ತು ಸ್ಪಂದನೆ ದೊರೆಯಬೇಕು. ಯಾರನ್ನು ಕಾಯಿಸಬಾರದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್.ಪವನ್ ಕುಮಾರ್ ಅವರು ನಿರ್ದೇಶನ ನೀಡಿದರು.ಬೆಳಗಿನ ೯.೩೦ ಗಂಟೆ ವೇಳೆಗೆ ಕೆಲವು ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹಾಜರಾಗದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಲೋಕಾಯುಕ್ತ ಡಿವೈಎಸ್‌ಪಿ ಅವರು ಸರಿಯಾದ ಸಮಯಕ್ಕೆ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹಾಜರಾಗಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಅವರು ಸೂಚಿಸಿದರು.
ಯಾವುದೇ ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆ ಬಿಟ್ಟು ಹೊರಗೆ ಹೋಗಿ ಖಾಸಗಿ ಕ್ಲೀನಿಕ್‌ನಲ್ಲಿ ಕರ್ತವ್ಯ ನಿರ್ವಹಿಸುವುದು ಕಾನೂನು ಬಾಹಿರವಾಗಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಅವರು ತಿಳಿಸಿದ್ದಾರೆ.ವಿರಾಜಪೇಟೆಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಎಲ್ಲಾ ವೈದ್ಯರು ಸಮವಸ್ತçದಲ್ಲಿ ಕರ್ತವ್ಯ ನಿರ್ವಹಿಸಬೇಕು. ಸರಿಯಾದ ಸಮಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು ಎಂದು ಸೂಚಿಸಿದರು.
ಬಡ ಜನರ ಬಗ್ಗೆ ಕರುಣೆ ಇರಬೇಕು. ಯಾವುದೇ ಕಾರಣಕ್ಕೂ ಚಿಕಿತ್ಸೆ ವಿಳಂಬ ಮಾಡದೆ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದರು.
