ಉದಯವಾಹಿನಿ ಮಸ್ಕಿ: ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದ್ದು, ಪತ್ರಕರ್ತರ ಸಮಸ್ಯೆಗಳನ್ನು ಸರಕಾರದ‌ ಗಮನಕ್ಕೆ ತರುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಶಾಸಕ ಆರ್.ಬಸನಗೌಡ ತುರವಿಹಾಳ ಅವರು ಭರವಸೆ ನೀಡಿದರು. ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ನಡೆದ ತಾಲೂಕ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ಹಿಸುತ್ತಿರುವ ಪತ್ರಕರ್ತರಿಗೆ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಸಂಕಷ್ಟದಲ್ಲಿಯು ಸಹ ತಮ್ಮ‌ ಬರವಣಿಗೆ ಮೂಲಕ‌ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನ ನಡೆಯುವ ಘಟನೆಗಳ ಮಾಹಿತಿ ಸಂಗ್ರಹಿಸಿ ಅದನ್ನು  ಸುದ್ದಿ ಬರೆಯುವ ಪತ್ರಕರ್ತರಿಗೆ ಸರಕಾರ ಭದ್ರತೆ ಒದಗಿಸುವ ಕೆಲಸ‌ ಆಗಬೇಕಿದೆ ಎಂದರು. ಪತ್ರಕರ್ತರ ಮೇಲೆ ದೊಡ್ಡ ಜವಬ್ದಾರಿ ಇರುತ್ತದೆ. ನಿಖರ ಪ್ರಮಾಣಿಕ ಸುದ್ದಿ ಬಿತ್ತರಿಸುವ ಕೆಲಸ‌ ಆಗಬೇಕೆಂದರು. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ‌ಅಬ್ದುಲ್ ಅಜೀಜ್ ಅವರು ಮಾತನಾಡಿ, ಪತ್ರಕರ್ತರಿಗೆ ಯಾವುದೇ ಸಂಬಳ ಇರುವುದಿಲ್ಲ, ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರಕಾರ ಭದ್ರತೆ ಒದಗಿಸಬೇಕು ಎಂದರು.
ಈ ವೇಳೆ ಜಿಲ್ಲಾ ಪ್ರಶಸ್ತಿ ಪುರಸ್ಕೃತರು ಇಂದರಪಾಶ ಚಿಂಚರಕಿ ಅವರಿಗೆ ಸನ್ಮಾನ ಮಾಡಲಾಯಿತು. ಪತ್ರಿಕಾ ವಿತರಕರಿಗೆ ನೋಟ್ ಬುಕ್, ಪೆನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ತಹಶೀಲ್ದಾರ ಸುಧಾ ಅರಮನೆ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಹಿರಿಯ ಮುಖಂಡ‌ ಮಹಾದೇವಪ್ಪಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ವೀರೇಶ ಸೌದ್ರಿ ಸೇರಿದಂತೆ ಇನ್ನಿತರಿದ್ದರು.

Leave a Reply

Your email address will not be published. Required fields are marked *

error: Content is protected !!