
ಉದಯವಾಹಿನಿ ರಾಮನಗರ: ರಾಜ್ಯದಲ್ಲಿ ಎಲ್ಲ ವರ್ಗದ ಜನರಿಗೆ ಪಕ್ಷಾತೀತವಾಗಿ ಗ್ಯಾರಂಟಿ ತಲುಪುತ್ತಿರುವುದು ವಿರೋಧ ಪಕ್ಷಗಳಿಗೆ ಭಯ ಹುಟ್ಟಿಸುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು. ನಗರದ ಜಯಪುರ ಗೇಟ್ ಬಳಿ ಇರುವ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯ 1750 ಶಾಲೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ 2.70 ಲಕ್ಷ ಲಾಡುಗಳನ್ನು ಬಿಇಓ ಗಳ ಮೂಲಕ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ವಿರೋಧ ಪಕ್ಷದವರಿಗೆ ಬೇರೆ ಯಾವ ವಿಚಾರ ಇಲ್ಲ.ಸುಖಾಸುಮ್ಮನೆ ಆರೋಪ ಮಾಡ್ತಿದ್ದಾರೆ ಅಷ್ಟೇ. ಎಲ್ಲ ಗ್ಯಾರಂಟಿಗಳು ಸಹ ಜನರಿಗೆ ತಲುಪುತ್ತಿವೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಡಿಕೆ ಭ್ರಷ್ಟಾಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿ ಸಿಎಂ ಆಗಬೇಕಾದರೆ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ರವರು ಬಹಳ ಶ್ರಮ ಹಾಕಿದ್ದರು.ಇದನ್ನು ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು.ಅಧಿಕಾರ ಬರುತ್ತೆ, ಹೋಗುತ್ತೆ ಆದರೆ ಎಲ್ಲ ಸಂದರ್ಭದಲ್ಲಿ ನನಗೆ ಅಧಿಕಾರ ಬೇಕು ಎಂದರೆ ಹೇಗೆ. ಇದನ್ನ ಅವರು ತಿದ್ದಿಕೊಳ್ಳಬೇಕು. ಸದ್ಯ ಅವರು ಹತಾಶೆಗೊಂಡಿದ್ದಾರೆ. ಜನ ಅವರಿಗೆ ಎಲ್ಲಾ ರೀತಿಯ ಅಧಿಕಾರ ಕೊಟ್ಟಿದ್ದಾರೆ.ಈಗ ಹತಾಶೆಗೊಂಡರೆ ಯಾವುದೇ ಪ್ರಯೋಜನ ಇಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.
ಲಾಡು ವಿತರಣೆ : 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಮನಗರ ಕ್ಷೇತ್ರದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಐದು ಜಿಲ್ಲೆಯ ಅಂಗನವಾಡಿ, ಸರ್ಕಾರಿ, ಖಾಸಗಿ ಶಾಲೆ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಸುಮಾರು 2 ಲಕ್ಷದ 70 ಸಾವಿರ ಲಾಡುಗಳನ್ನು ಸ್ವಂತ ಖರ್ಚಿನಲ್ಲಿ ವಿತರಿಸಿದರು.
ಈ ವೇಳೆ ಮಾಜಿ ಶಾಸಕ ಕೆ.ರಾಜು, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಕೆಎಂಎಪ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಬಿ.ಚೇತನ್ ಕುಮಾರ್, ವಿ.ಎಚ್.ರಾಜು, ನಗರಸಭೆ ಪ್ರಭಾರ ಅಧ್ಯಕ್ಷ ಸೋಮಶೇಖರ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ಬಿಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಣ್ಣ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಹಿರಿಯ ಕಿರಿಯ ಮುಖಂಡರುಗಳು ಇದ್ದರು.
