ಉದಯವಾಹಿನಿ, ಕೀವ್ (ಉಕ್ರೇನ್): ಒಂದೆಡೆ ರಷ್ಯಾದ ತೀವ್ರ ದಾಳಿಯ ಹೊರತಾಗಿಯೂ ಉಕ್ರೇನ್ ವೀರಾವೇಷದಿಂದ ಹೋರಾಟ ನಡೆಸುತ್ತಿದೆ. ಆದರೆ ಇದರ ನಡುವೆ ಉಕ್ರೇನ್‌ನ ಯುದ್ದಸಾಮರ್ಥ್ಯದ ಬಗೆಗಿನ ಅಮೆರಿಕಾ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ರಷ್ಯಾದ ಆಕ್ರಮಿತ ಆಗ್ನೇಯ ಆಯಕಟ್ಟಿನ ನಗರ ಮೆಲಿಟೊಪೋಲ್ ಅನ್ನು ಉಕ್ರೇನ್ ಮರಳಿ ಪಡೆಯುವಲ್ಲಿ ಉಕ್ರೇನ್ ಪಡೆಗಳು ವಿಫಲವಾಗಬಹುದು ಎಂದು ಅಮೆರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ ಗುರುವಾರ ಆಗ್ನೇಯ ಭಾಗದಲ್ಲಿ ನಾವು ಹೆಚ್ಚಿನ ಮುನ್ನಡೆ ಪಡೆದುಕೊಂಡಿದ್ದೇವೆ ಎಂದು ಉಕ್ರೇನ್ ಪ್ರತಿಪಾದಿಸಿದೆ. ಹೊಸದಾಗಿ ವಿಮೋಚನೆಗೊಂಡ ಹಳ್ಳಿ ಉರೋಜೈನ್‌ನಿಂದ ಅಜೋವ್ ಸಮುದ್ರದ ಕಡೆಗೆ ಪ್ರಯತ್ನದಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ ಎಂದು ಅದು ತಿಳಿಸಿದೆ. ಇನ್ನು ಯುದ್ದಪೂರ್ವದಲ್ಲಿ ಸುಮಾರು ೧.೫೦ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದ ಮೆಲಿಟೊಪೋಲ್ ಅನ್ನು ರಷ್ಯಾವು ಕಳೆದ ವರ್ಷ ಮಾರ್ಚ್‌ನಲ್ಲಿ ವಶಪಡಿಸಿಕೊಂಡಿತ್ತು. ಈ ನಡುವೆ ಅಮೆರಿಕಾದ ಅನಾಮಧೇಯ ಅಧಿಕಾರಿಯೊಬ್ಬರು ಗುಪ್ತಚರ ವರದಿಯನ್ನು ಉಲ್ಲೇಖಿಸುತ್ತಾ, ಉಕ್ರೇನ್‌ನ ಪ್ರತಿದಾಳಿಯು ತುಂಬಾ ನಿಧಾನವಾಗಿ ನಡೆಯುತ್ತಿದ್ದು, ಹಾಗಾಗಿ ಮೆಲಿಟೊಪೋಲ್ ಅನ್ನು ಮರಳಿ ಪಡೆಯುವುದು ವಿಫಲವಾಗಬಹುದು. ಆದರೆ ಇದರ ಹೊರತಾಗಿಯೂ ಪರಿಸ್ಥಿತಿಯನ್ನು ಬದಲಾಯಿಸಲು ಇನ್ನೂ ಸಾಧ್ಯವಿದೆ ಎಂದು ತಿಳಿಸಿದೆ. ಆದರೆ ಇನ್ನು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜ್ಯಾಕ್ ಸುಲಿವಾನ್ ನಿರಾಕರಿಸಿದ್ದಾರೆ. ಕ್ರೈಮಿಯ ಪರ್ಯಾಯ ದ್ವೀಪ, ಲುಹಾನ್ಸ್ಕ್ ಪ್ರದೇಶದ ಬಹುಪಾಲು ಮತ್ತು ಡೊನೆಟ್ಸ್ಕ್, ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶಗಳ ದೊಡ್ಡ ಪ್ರದೇಶಗಳು ಸೇರಿದಂತೆ ಉಕ್ರೇನ್‌ನ ಸುಮಾರು ಐದನೇ ಒಂದು ಭಾಗವನ್ನು ಸದ್ಯ ರಷ್ಯಾ ನಿಯಂತ್ರಿಸುತ್ತಿದೆ. ಕಳೆದ ವರ್ಷ ಫೆಬ್ರವರಿಯಿಂದ ಎರಡೂ ರಾಷ್ಟ್ರಗಳ ನಡುವೆ ಯುದ್ದ ಆರಂಭವಾದಂದಿನಿಂದ ಇದುವರೆಗೂ ಸುಮಾರು ೫ ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
