ಉದಯವಾಹಿನಿ ದೇವನಹಳ್ಳಿ:  ದೇವರಾಜ ಅರಸು ಅವರು ಶೋಷಿತ ವರ್ಗದ ಎಲ್ಲಾ ಬಡವರ ಜೀವನ ಸುಧಾರಣೆಗಾಗಿ ಶ್ರಮಿಸಿದವರು, ರಾಜ್ಯದ ಅಭಿವೃದ್ಧಿಯಲ್ಲಿ ಅವರ ಕೊಡುಗೆ  ಅಪಾರವಾದದ್ದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
 ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ದೇವನಹಳ್ಳಿ ಟೌನ್  ನಲ್ಲಿ ಇರುವ ಡಿ‌.ದೇವರಾಜು ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜು ಅರಸು ರವರ 108ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ದೇವರಾಜ ಅರಸು ಅವರು ಬಡವರ ಧ್ವನಿಯಾಗಿದ್ದರು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನಿಂತವರು. ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಶಿಕ್ಷಣ ಮತ್ತು ಸಮಾಜದ ಶೋಷಿತ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳ ಸ್ಥಾಪನೆಗೆ ಒತ್ತು ನೀಡಿದರು. ಭೂಮಿಯನ್ನು ಉಳುವವನೇ ಮಾಲೀಕ ಎಂಬ ಕಾನೂನು ಜಾರಿಗೆ ತಂದು ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡಿದರು. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿದರು.ಕರ್ನಾಟಕದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು ಕೂಡ ಒಬ್ಬರಾಗಿದ್ದರು ಎಂದು ಹೇಳಿದರು.ಇಂದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಕೂಡ ಆಚರಿಸಲಾಗುತ್ತಿದೆ.  ಸದ್ಭಾವನಾ ದಿನ ಎಂದು ಈ ದಿನವನ್ನು ಕರೆಯುತ್ತಾರೆ. ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಜಿಲ್ಲಾಧಿಕಾರಿಗಳು ಬೋಧಿಸಿದರು.ಈ ವೇಳೆ  ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್, ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್, ದೇವನಹಳ್ಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಗಳಾದ ನಿರುಪಮಾ, ವಿನೋದ, ಸೇರಿದಂತೆ ಜಿಲ್ಲಾಮಟ್ಟದ,ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!