
ಉದಯವಾಹಿನಿ, ಕೆನಡಾ: ತೀವ್ರ ರೀತಿಯ ಕಾಡ್ಗಿಚ್ಚಿನ ಪರಿಣಾಮ ಈಗಾಗಲೇ ತುರ್ತುಪರಿಸ್ಥಿತಿ ಘೋಷಿಸಲಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಈಗಾಗಲೇ ಸುಮಾರು ೪೦೦ ಕಡೆಗಳಲ್ಲಿ ಭೀಕರ ಅಗ್ನಿ ಅವಘಡ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ೩೦ ಸಾವಿರಕ್ಕೂ ಅಧಿಕ ಮನೆಗಳ ಸ್ಥಳಾಂತರಕ್ಕೆ ಆದೇಶ ನೀಡಲಾಗಿದೆ.
ಅದರಲ್ಲೂ ಶುಸ್ವಾಪ್ ಪ್ರದೇಶದಲ್ಲಿ ಎರಡು ಬೃಹತ್ ಅಗ್ನಿ ಜ್ವಾಲೆಗಳು ಹಲವು ಮನೆಗಳು ಹಾಗೂ ಕಟ್ಟಡಗಳನ್ನು ಸುಟ್ಟು ಕರಕಲಾಗಿಸಿವೆ. ದಕ್ಷಿಣಕ್ಕೆ, ಕೆಲೋವ್ನಾ ಎಂಬ ಜಲಾನಯನ ನಗರಕ್ಕೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಹತ್ತಿರದ ಒಕಾನಗನ್ ಸರೋವರದ ಬಳಿ ಭಾರೀ ಪ್ರಮಾಣದ ಹೊಗೆ ಏಳಲಾರಂಭಿಸಿದೆ. ಸುಮಾರು ೩೬ ಸಾವಿರ ಜನಸಂಖ್ಯೆ ಹೊಂದಿರುವ ಸಮೀಪದ ಪಶ್ಚಿಮ ಕೆಲೋನಾದಲ್ಲಿ ಹಲವು ಮನೆಗಳನ್ನು ಭಸ್ಮಗೊಳಿಸಿದೆ. ಕೆಲೋವ್ನಾ ಸುತ್ತಮುತ್ತಲಿನ ಪ್ರಯಾಣ ನಿರ್ಬಂಧವನ್ನು ಸ್ಥಳಾಂತರಿಸುವವರಿಗೆ ಮತ್ತು ತುರ್ತು ಕೆಲಸಗಾರರಿಗೆ ಸಾಕಷ್ಟು ವಸತಿ ಸೌಕರ್ಯವನ್ನು ಖಚಿತಪಡಿಸಿಕೊಂಡು ಇದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ನಿಯಮವನ್ನು ಇದು ಕಮ್ಲೂಪ್ಸ್, ಆಲಿವರ್, ಪೆಂಟಿಕ್ಟನ್ ಮತ್ತು ವೆರ್ನಾನ್ ಮತ್ತು ಓಸೊಯೂಸ್ ಪಟ್ಟಣಗಳಿಗೂ ಅನ್ವಯಿಸಲಾಗಿದೆ. ಬ್ರಿಟಿಷ್ ಕೊಲಂಬಿಯಾದಲ್ಲಿ ಶುಕ್ರವಾರದಂದು ಆರಂಭದಲ್ಲಿ ೧೫,೦೦೦ ಮನೆಗಳನ್ನು ಸ್ಥಳಾಂತರಿಸುವ ಆದೇಶ ನೀಡಲಾಗಿತ್ತು. ಆದರೆ ಶನಿವಾರ ಸಂಜೆಯ ವೇಳೆಗೆ ಇದರ ಪ್ರಮಾಣ ಕನಿಷ್ಠ ೩೦,೦೦೦ ಕ್ಕೆ ಏರಿಯಾಗಿದೆ.
