
ಉದಯವಾಹಿನಿ ದೇವರಹಿಪ್ಪರಗಿ: ನಾಗರ ಪಂಚಮಿ ಅಂಗವಾಗಿ ಸೋಮವಾರದಂದು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನರು ಕಲ್ಲು ನಾಗರಗಳಿಗೆ ಭಕ್ತಿಯಿಂದ ಪೂಜಿಸಿ ಹಾಲೆರೆದರು.
ಪಟ್ಟಣದ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ತಂಡೋಪ ತಂಡವಾಗಿ ಮಕ್ಕಳ ಜೊತೆ ಬಂದು ಬೆಳಿಗ್ಗೆಯಿಂದಲೇ ಕಲ್ಲಿನ ನಾಗಪ್ಪಗೆ ಹಾಲೆರೆದ ಭಕ್ತಿ ಮೆರೆದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕೊಳವೆ ಬಾವಿಗಳು ಪ್ರತಿ ಓಣಿ ಓಣಿಗಳಲ್ಲಿ ಇರುತ್ತಿದ್ದವು. ಇಂತಹ ಬಾವಿಕಟ್ಟೆ ಮೇಲೆ ನಾಗರ ಕಲ್ಲಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತಿತ್ತು.ಪ್ರತಿ ನಾಗರ ಪಂಚಮಿ ಹಬ್ಬದಂದು ಜನರು ನಾಗರಗಳಿಗೆ ಹಾಲೆರೆಯುವತ್ತಿದ್ದರು.ಸದ್ಯ ಬಾವಿಗಳು ಬತ್ತಿವೆ.ಇನ್ನು ಕೆಲ ಗ್ರಾಮಗಳಲ್ಲಿ ಬಾವಿಗಳನ್ನು ಮುಚ್ಚಲಾಗಿದೆ ಆದರೆ ಅಲ್ಲಿನ ನಾಗರ ಮೂರ್ತಿಗಳು ಮಾತ್ರ ಈಗಲೂ ಅಲ್ಲೆ ಉಳಿದುಕೊಂಡಿವೆ. ಕೆಲ ಗ್ರಾಮಗಳಲ್ಲಿ ವಿಶೇಷವಾಗಿ ನಾಗರಕಟ್ಟೆಗಳೆ ಇದ್ದು ಅಲ್ಲಿ ಭಕ್ತರು ಹಾಲೆರೆಯುವುದು ಸಂಪ್ರದಾಯ. ದೇವರ ಹಿಪ್ಪರಗಿ ಪಟ್ಟಣದ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ನಾಗ ದೇವತೆಯ ಕಟ್ಟೆ ಇದೆ. ವಿಶೇಷವಾಗಿ ನಾಗರ ಪಂಚಮಿ ಎಂದು ಮಹಿಳೆಯರು ಮಕ್ಕಳೊಂದಿಗೆ ನಾಗರಕಟ್ಟೆಗಳಿಗೆ ಆಗಮಿಸಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಒಣಕೊಬ್ಬರಿ ಬಟ್ಟಲಿನಲ್ಲಿ ಶಾಲು ತೆಗೆದುಕೊಂಡು ‘ಅವ್ವನ ಪಾಲು, ಅಪ್ಪನ ಪಾಲು, ಅಣ್ಣನ ಪಾಲು, ಅಕ್ಕನ ಪಾಲು, ತಂಗಿಯ ಪಾಲು, ತಮ್ಮನ ಪಾಲು ಹಾಗೂ ಗುರು ಹಿರಿಯರ ಪಾಲು ಎಂದು ಹೇಳುತ್ತಾ ನಾಗರಮೂರ್ತಿಗಳ ಮೇಲೆ ಹಾಲು ಹಾಕುತ್ತೇವೆ ಎಂದು ಪಟ್ಟಣದ ರೇಣುಕಾ ಬಿರಾದಾರ ತಮ್ಮ ಸಂಗಡಿಗರ ಜೊತೆ ಹಬ್ಬದ ಸಡಗರ ಕುರಿತು ಪತ್ರಿಕೆ ಜೊತೆ ಹಂಚಿಕೊಂಡರು. ನಂತರ ಶೇಂಗಾ ,ಎಳ್ಳು,ಡಾಣಿ ಗುಳಿಗೆ,ರವೆ ಉಂಡಿ ಸೇರಿದಂತೆ ವಿವಿಧ ತರದ ಉಂಡೆಗಳನ್ನು ಮತ್ತು ಕಡಲೆ ಕಾಳಿನ ಉಸುಳಿಯನ್ನು ನೈವೇದ್ಯ ಮಾಡಿದರು. ಇನ್ನು ಹತ್ತಿಯಿಂದ ಸಿದ್ಧಪಡಿಸಿದ ಹೊಂಗನೊಲನ್ನು ಕೊರಳಿಗೆ ಧರಿಸಿಕೊಂಡರು.ಸಂಜೆ ಯುವಕ, ಯುವತಿಯರು, ಮಕ್ಕಳು, ಮಹಿಳೆಯರು ಓಣಿಯ ಮರಗಳಿಗೆ ಕಟ್ಟಿದ ಜೋಕಾಲಿಯಲ್ಲಿ ಜೀಕಿ ಖುಷಿಪಟ್ಟರು. ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ತಾಲೂಕಿನ ಕೆಲ ಊರುಗಳಲ್ಲಿ ಭಾರವಾದ ಕಲ್ಲಿನ ಗುಂಡ ಎತ್ತುವುದು. ಸಣ್ಣ ಜೋಕಾಲಿ ಜೀಕಿ ಮರದ ರೆಂಬೆಗೆ ಕಟ್ಟಿದ ಕೊಬ್ಬರಿ ಬಟ್ಟಲು ಹರಿಯುವಂತಹ ಜಾನಪದ ಕ್ರೀಡೆಗಳನ್ನು ಕೈಗೊಳ್ಳುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
