ಉದಯವಾಹಿನಿ ಮುದ್ದೇಬಿಹಾಳ : ಸಾಮಾನ್ಯವಾಗಿ ಸರಕಾರಿ ಕಚೇರಿ ಎದುರಿಗೆ ನಾಗರಿಕರು ವಿವಿಧ ಸಮಸ್ಯೆಗಳನ್ನು ಹೊತ್ತುಕೊಂಡು ಬಂದು ಪ್ರತಿಭಟನೆ ನಡೆಸುವುದು,ಹಲಿಗೆ ಬಡಿದು ತಮ್ಮ ಬೇಡಿಕೆಯ ಬಗ್ಗೆ ಗಮನ ಸೆಳೆಯುವುದನ್ನು ಕಂಡಿದ್ದೇವೆ.ಆದರೆ ಮುದ್ದೇಬಿಹಾಳ ಪುರಸಭೆ ಅಧಿಕಾರಿಗಳು ಒಂದು ಹೆಜ್ಜೆ ಮುಂದೆ ಹೋಗಿ ಪುರಸಭೆಗೆ ಬರಬೇಕಿದ್ದ ಆಸ್ತಿಕರದ ಬಾಕಿ ಪಾವತಿಸುವಂತೆ ಬಾರ್ ಮುಂದೆ ಹಲಿಗೆ ವಾದನ ಮಾಡಿಸಿರುವ ಘಟನೆ ಪಟ್ಟಣದಲ್ಲಿ ಸೋಮವಾರ ನಡೆಯಿತು.ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ವಾರ್ಡ ಸಂಖ್ಯೆ 7ರಲ್ಲಿ ಬರುವ ಆಸ್ತಿ ಸಂಖ್ಯೆ 1968ರ ಎಸ್.ಎಸ್.ಕರಭಂಟನಾಳ ಅವರಿಗೆ ಸೇರಿದ ಪಲ್ಲವಿ ಬಾರ್ ಹಾಗೂ ರೆಸ್ಟೋರೆಂಟ್‌ನ ಕಟ್ಟಡದ ಎದುರಿಗೆ ಪುರಸಭೆ ಕಂದಾಯ ವಿಭಾಗದ ಅಧಿಕಾರಿಗಳು ಪೌರಕಾರ್ಮಿಕರನ್ನು ಹಲಿಗೆ ಬಡಿಯುವ ಕಾರ್ಯವನ್ನು ಆರಂಭಿಸಿದರು.ತಕ್ಷಣ ಸ್ಥಳಕ್ಕೆ ಆಗಮಿಸಿದ ಆಸ್ತಿಯ ಮಾಲೀಕ ಸಂಗಮೇಶ ಕರಭಂಟನಾಳ ಪುರಸಭೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರಲ್ಲದೇ ನಾವು ಟ್ಯಾಕ್ಸ್ ಕಟ್ಟಬೇಕು ನಿಜ.ನಮ್ಮ ಕಟ್ಟಡದ ಎದುರಿಗೆ ಹಲಿಗೆ ಬಡಿಯುವಂತೆ ಆದೇಶ ಏನಾದರೂ ಇದೆಯೇ ಇದ್ದರೆ ತಂದು ಹಲಿಗೆ ಬಡಿಯಿರಿ ಎಂದು ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದರು.
ಈ ವೇಳೆ ಮಾತನಾಡಿದ ಪುರಸಭೆ ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ್,ಕಂದಾಯ ನಿರೀಕ್ಷಕ ಸಂತೋಷ ಮಠ,ಈಗಾಗಲೇ ಆಸ್ತಿ ತೆರಿಗೆ ಬಾಕಿ ಕಟ್ಟಲು ತಮಗೆ ತಿಳಿಸಲಾಗಿದೆ.ಬಾಕಿ ಇರಿಸಿಕೊಂಡಿದ್ದಕ್ಕೆ ನಾವು ಹಲಿಗೆ ಬಡಿಯಲು ಹಚ್ಚಿದ್ದು.ನೀವು ಬಾಕಿ ಸರಕಾರಕ್ಕೆ ತುಂಬಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಲ್ ಕಲೆಕ್ಟರ್ ಶರಣು ಚಲವಾದಿ,ಶಮ್ಸುದ್ದೀನ್ ಮೂಲಿಮನಿ,ಉಮೇಶ ದೇವರ,ಆರೋಗ್ಯ ನಿರೀಕ್ಷಕರಾದ ಜಾವೇದ ನಾಯ್ಕೋಡಿ,ಮಹಾಂತೇಶ ಕಟ್ಟಿಮನಿ ಮೊದಲಾದವರು ಇದ್ದರು.ಮದ್ಯಾಹ್ನದವರೆಗೂ ಹಲಿಗೆ ಬಡಿಯುವ ಕಾರ್ಯವನ್ನು ಪುರಸಭೆ ಪೌರಕಾರ್ಮಿಕರು ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ ಮಾತನಾಡಿ, ಸನ್ 2005-06ರಿಂದ 2023-24ರವರೆಗೆ ಆಸ್ತಿ ಕರವನ್ನು ತುಂಬಿಲ್ಲ.36,98,108 ರೂ.ಬಾಕಿ ಕಟ್ಟಬೇಕಾಗಿದೆ.ಸಾಕಷ್ಟು ಬಾರಿ ತಿಳಿ ಹೇಳಿದ್ದರೂ ಅವರು ಆಸ್ತಿಕರ ತುಂಬಿಲ್ಲ.ಏಳು ದಿನಗಳಲ್ಲಿ ಬಾಕಿ ತುಂಬದಿದ್ದಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!