ಉದಯವಾಹಿನಿ, ಪ್ಯೊಂಗ್ರ್ಯಾಂಗ್ : ಕ್ಷಿಪಣಿ ಹಾಗೂ ಪರಮಾಣು ತಂತ್ರಜ್ಞಾನದಲ್ಲಿ ಅತ್ಯದ್ಬುತ ಪ್ರಗತಿ ಸಾಧಿಸಿದ್ದರೂ ಉತ್ತರ ಕೊರಿಯಾ ಉಪಗ್ರಹ ಕ್ಷೇತ್ರದಲ್ಲಿ ಉತ್ತರ ಕೊರಿಯಾ ಮತ್ತೆ ಹಿಂದೆ ಬಿದ್ದಿದೆ. ಪತ್ತೆಧಾರಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಉತ್ತರ ಕೊರಿಯಾದ ಇತ್ತೀಚಿನ ಪ್ರಯತ್ನ ವಿಫಲವಾಗಿದೆ ಎಂದು ಸ್ಥಳೀಯ ಮಾಧ್ಯಮವು ಗುರುವಾರ ಹೇಳಿದೆ.
ಉತ್ತರ ಕೊರಿಯಾದ ಮೊದಲ ಉಪಗ್ರಹವು ಉಡಾವಣೆಗೊಂಡ ಸ್ವಲ್ಪ ಸಮಯದ ನಂತರ ಸಾಗರಕ್ಕೆ ಅಪ್ಪಳಿಸಿದೆ. ಇಂಡೋ-ಪೆಸಿಫಿಕ್ ಹಾಗೂ ಕೊರಿಯನ್ ದ್ವೀಪ ಸಮೂಹದಲ್ಲಿ ಆಕಾಶದ ಮೂಲಕ ಹದ್ದಿನ ಕಣ್ಣಿಡುವ ಉತ್ತರ ಕೊರಿಯಾ ಮುಖ್ಯಸ್ಥ ಕಿಮ್ ಜೊಂಗ್ ಉನ್ ಅವರ ಕನಸಿಗೆ ಮತ್ತೆ ಹಿನ್ನಡೆ ಕಂಡಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಸ್ಥಳೀಯ ಮಾಧ್ಯಮ, ಉತ್ತರ ಕೊರಿಯಾದ ರಾಷ್ಟ್ರೀಯ ಏರೋಸ್ಪೇಸ್ ಡೆವಲಪ್‌ಮೆಂಟ್ ಅಡ್ಮಿನಿಸ್ಟ್ರೇಷನ್ “ಹೊಸ ಮಾದರಿಯ ವಾಹಕ ರಾಕೆಟ್ ಚೋಲ್ಲಿಮಾ -೧ ನಲ್ಲಿ ವಿಚಕ್ಷಣ ಉಪಗ್ರಹ ಮಲ್ಲಿಗ್ಯಾಂಗ್ -೧ ರ ಎರಡನೇ ಉಡಾವಣೆಯನ್ನು ಆಗಸ್ಟ್ ೨೪ ರ ಮುಂಜಾನೆ ಉತ್ತರ ಫಿಯೋಂಗನ್ ಪ್ರಾಂತ್ಯದ ಚೋಲ್ಸನ್ ಕೌಂಟಿಯಲ್ಲಿರುವ ಸೋಹೆ ಉಪಗ್ರಹ ಉಡಾವಣಾ ತಾಣದಲ್ಲಿ ನಡೆಸಿತ್ತು. ರಾಕೆಟ್‌ನ ಮೊದಲ ಮತ್ತು ಎರಡನೇ ಹಂತದ ಹಾರಾಟಗಳು ಸಾಮಾನ್ಯವಾಗಿದ್ದವು, ಆದರೆ ಮೂರನೇ ಹಂತದ ಹಾರಾಟದ ಸಮಯದಲ್ಲಿ ತುರ್ತು ಬ್ಲಾಸ್ಟಿಂಗ್ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಉಡಾವಣೆ ವಿಫಲವಾಗಿದೆ. ಇನ್ನು ಅಪಘಾತದ ಕಾರಣವು ದೊಡ್ಡ ಸಮಸ್ಯೆಯಲ್ಲ. ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ನಂತರ ಅಕ್ಟೋಬರ್‌ನಲ್ಲಿ ಮತ್ತೊಮ್ಮೆ ಮೂರನೇ ಉಡಾವಣೆ ನಡೆಸಲಾಗುವುದು ಎಂದು ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.
