ಉದಯವಾಹಿನಿ, ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ಮಾರಾಟ ಮಾಡಲು ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಇಬ್ಬರೂ ಮುಳುಗಿ ಸಾವಿಗೀಡಾದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ಶಾಂತಿನಗರದ ಪುಟ್ಟರಾಜು (೪೨) ಹಾಗೂ ಅವರ ಪುತ್ರ ಕೇಶವ (೧೪) ಮೃತಪಟ್ಟವರು
ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಮಾರಾಟ ಮಾಡಲು ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ತಂದೆ ಮಗ ಹೋಗಿದ್ದರು. ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ಮುಂದಾದ ವೇಳೆ ಅವಘಡ ಸಂಭವಿಸಿದೆ.
ಆಳ ತಿಳಿಯದೆ ಇದ್ದುದ್ದರಿಂದ ಕೆಸರಿನಲ್ಲಿ ಸಿಲುಕಿ ಇಬ್ಬರೂ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಇಬ್ಬರು ಕೆರೆಯಲ್ಲಿ ಮುಳುಗಿರುವ ಬಗ್ಗೆ ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಕೆರೆಯಲ್ಲಿ ಮೃತದೇಹಗಳಿಗೆ ಶೋಧ ನಡೆಸಿ ದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಮೃತದೇಹಗಳನ್ನು ಕಂಡ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ.ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!