ಉದಯವಾಹನಿ, ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಿರಿಗೇರಿ ರಸ್ತೆಯಲ್ಲಿ ಆಟೋ ಪಲ್ಟಿಯಾಗಿದ್ದು ಭತ್ತದ ನಾಟಿಗೆ ತೆರಳಿದ್ದ 25ಕ್ಕೂ ಅಧಿಕ ಮಹಿಳೆಯರು ಗಾಯಗೊಂಡಿರುವ ಘಟನೆ ತಾಲೂಕಿನ ತೆಕ್ಕಲಕೋಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ವಾಲ್ಮೀಕಿ ನಗರದ 15 ರಿಂದ 18ನೇ ವಾರ್ಡಿನ ವಾಲ್ಮೀಕಿ ಜನಾಂಗದ ಮಹಿಳೆಯರು ಸಿರಿಗೇರಿ ರಸ್ತೆಯಲ್ಲಿನ ಶ್ರೀ ಮಾರೆಮ್ಮ ದೇವಸ್ಥಾನದ ಹತ್ತಿರದ ಜಮೀನಿಗೆ ಭತ್ತ ನಾಟಿಗೆ ತೆರಳಿದ್ದರೆಂದು ಮಾಹಿತಿ ತಿಳಿದುಬಂದಿದೆ.
ನಾಟಿ ನಂತರ ಮತ್ತು ಮರಳಿ ಮನೆಗೆ ವಾಪಸ್ಸು ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದ್ದರಿಂದ ಆಟೋದಲ್ಲಿದ್ದ ಮಹಿಳೆಯರು ಗಾಯಗೊಂಡಿದ್ದಾರೆ. ಅದರಲ್ಲಿ 5 ಜನ ಮಹಿಳಾ ಕೂಲಿ ಕಾರ್ಮಿಕರು ತೀವ್ರ ಗಾಯಗೊಂಡಿದ್ದು ಎಲ್ಲರನ್ನೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಲಾಯಿತು.
ಆಟೋ ಪಲ್ಟಿಯಾದ ನಂತರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳ ನರಳಾಟ ಹಾಗೂ ಸಂಬಂದಿಕರ ಆಕ್ರಂದನ ಪ್ರಾಥಮಿಕ ಚಿಕಿತ್ಸೆ ನೀಡಲು ಸಿಬ್ಬಂದಿಗಳ ಚಾಕಚಕ್ಯತನ ಕಂಡುಬಂದಿತು.
ಆಸ್ಪತ್ರೆಗೆ ಆಗಮಿಸಿದ ಸಂಬಂದಿಕರನ್ನು ಪೋಲೀಸರಿಂದ ನಿಯಂತ್ರಿಸಲು ಯತ್ನಿಸಲಾಯಿತು ಆದರೂ ನೋವಿನಲ್ಲಿರುವವರನ್ನು ತಡೆಯಲು ತುಸು ಕಷ್ಟವೆನಿಸಿತು.
ತಾಲೂಕು ಸಾರ್ವಜನಿಕ ಆಸ್ಪತ್ರೆ, ಹಚ್ಚೊಳ್ಳಿ, ತೆಕ್ಕಲಕೋಟೆ ಆರೋಗ್ಯ ಕೇಂದ್ರಗಳಿಂದ ಬಂದ ಅಂಬುಲೆನ್ಸ್ಗಳಲ್ಲಿ ಎಲ್ಲಾ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು.
ಇದೇ ವೇಳೆ ಸಿಪಿಐ ಸುಂದ್ರೇಶ್ ಹೊಳೆಣ್ಣನವರ್, ಪಿ.ಎಸ್.ಐ ಶಾಂತಮೂರ್ತಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
