
ಉದಯವಾಹಿನಿ, ನವದೆಹಲಿ : ಉಭಯ ರಾಜ್ಯಗಳು ತಮ್ಮ ಜಲಾಶಯಗಳ ವಾಸ್ತವ ಸ್ಥಿತಿಯನ್ನು ಲಿಖಿತ ಮೂಲಕ ಸಲ್ಲಿಸಬೇಕೆಂದು ಸೂಚಿಸಿರುವ ಸುಪ್ರೀಂಕೋರ್ಟ್, ಬೆಳೆದು ನಿಂತಿರುವ ಬೆಳೆಗಳಿಗೆ ಕರ್ನಾಟಕದಿಂದ ಪ್ರತಿದಿನ 24,000 ಕ್ಯುಸೆಕ್ ಕಾವೇರಿ ನೀರು ಬಿಡುವಂತೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಮನವಿಗೆ ಯಾವುದೇ ಆದೇಶ ನೀಡಲು ನಿರಾಕರಿಸಿದೆ.ಸೆಪ್ಟೆಂಬರ್ 1ರ ಮಧ್ಯಂತರ ಅವಧಿಯೊಳಗೆ ಕಾವೇರಿ ನದಿ ಪಾತ್ರದ ರಾಜ್ಯಗಳ ಸಭೆಯನ್ನು ನಡೆಸಬೇಕು ಎಂದು ತ್ರಿಸದಸ್ಯ ಪೀಠ ಕಾವೇರಿ ನದಿ ನೀರು ನಿರ್ವಹಣಾ ಪ್ರಾಕಾರಕ್ಕೆ ಸೂಚನೆ ನೀಡಿತು.
ಸೋಮವಾರ ಪ್ರಾಕಾರದ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದ ನಂತರ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಪಿ.ಎಸ್.ನರಸಿಂಹ, ಮತ್ತು ಪ್ರಶಾಂತ್ ಮಿಶ್ರಾ ಅವರನ್ನೊಳಗೊಂಡ ನೇತೃತ್ವದ ತ್ರಿಸದಸ್ಯ ಪೀಠವು ಕಾವೇರಿ ನೀರು ನಿರ್ವಹಣಾ ಪ್ರಾಕಾರದಿಂದ (ಸಿಡಬ್ಲ್ಯುಎಂಎ) ಕರ್ನಾಟಕ ಬಿಡುಗಡೆ ಮಾಡಿದ ನೀರಿನ ಪ್ರಮಾಣದ ಬಗ್ಗೆ ವರದಿ ಕೇಳಿ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದೆ.
