ಉದಯವಾಹಿನಿ, ಬೆಂಗಳೂರು: ಪೀಣ್ಯದಲ್ಲಿರುವ ಇಸ್ರೊ ಕೇಂದ್ರದಲ್ಲಿ ಚಂದ್ರಯಾನ-3 ಯೋಜನೆ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿ ಭಾಷಣ ಮಾಡುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ವಿಡಿಯೊ ಹಂಚಿಕೊಂಡಿದೆ.
ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಕಮಾಂಡಿಂಗ್‌ ಸೆಂಟರ್‌ನಲ್ಲಿ ಚಂದ್ರಯಾನ-3ರ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡುವ ವೇಳೆ ಪ್ರಧಾನಿಭಾವುಕರಾದರು.ನಾನು ದಕ್ಷಿಣ ಆಫ್ರಿಕಾದಲ್ಲಿದ್ದರೂ ನನ್ನ ಮನಸ್ಸು ಇಲ್ಲೇ ನಿಮ್ಮೊಂದಿಗೆ ಇತ್ತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿದ ಬಳಿಕ ಆದಷ್ಟು ಬೇಗನೇ ನಿಮ್ಮನ್ನು ಭೇಟಿಯಾಗಲು ಬಯಸಿದ್ದೆ ಎಂದು ಪ್ರಧಾನಿ ಹೇಳಿದ್ದಾರೆ.
‘ನಿಮಗೆಲ್ಲರಿಗೂ ಸೆಲ್ಯೂಟ್ ಮಾಡಲು ಬಯಸಿದ್ದೆ’ ಎಂದು ಹೇಳಿದ ತಕ್ಷಣ ಪ್ರಧಾನಿ ಭಾವುಕರಾಗಿ ಕಂಡರು. ಕೆಲವು ಕ್ಷಣದ ಬಳಿಕ ಭಾಷಣ ಮುಂದುವರಿಸಿದ ಅವರು, ನಿಮ್ಮ ಧೈರ್ಯ, ಪರಿಶ್ರಮಕ್ಕೆ ನನ್ನ ಸೆಲ್ಯೂಟ್. ಇದೇನು ಸಾಮಾನ್ಯ ಸಾಧನೆಯಲ್ಲ. ಬಾಹ್ಯಾಕಾಶದಲ್ಲಿ ಭಾರತದ ವಿಜ್ಞಾನ ಸಾಮರ್ಥ್ಯದ ಶಂಖನಾದ ಮೊಳಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ 23ರ ಆ ಕ್ಷಣ ಭಾರತದ ಪಾಲಿಗೆ ಅವಿಸ್ಮರಣೀಯವಾದುದುಸ. ಈ ಐತಿಹಾಸಿಕ ಸಾಧನೆಯನ್ನು ಸ್ಮರಿಸುವುದಕ್ಕಾಗಿ ಆ ದಿನವನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!