ಉದಯವಾಹಿನಿ, ಮುಜಾಫರ್‌ನಗರ (ಉತ್ತರ ಪ್ರದೇಶ): ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳಿಂದಲೇ ಕಪಾಳಮೋಕ್ಷ ಮಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಕಿ ತ್ರಿಪ್ತ ತ್ಯಾಗಿ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಜಾಫರ್‌ನಗರದ ಖುಬ್ಬಾಪುರ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಹೋಮ್ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಹುಡುಗನಿಗೆ ಸಹಪಾಠಿಗಳಿಂದಲೇ ಕಪಾಳ ಮೋಕ್ಷ ಮಾಡುವಂತೆ ಆದೇಶಿಸಿದ್ದ ಶಿಕ್ಷಕಿ, ಕೋಮು ಪ್ರೇರಿತ ಹೇಳಿಕೆಗಳನ್ನು ನೀಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ವಿದ್ಯಾರ್ಥಿಯ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಶಿಕ್ಷಕಿ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ ಎಂಬುವುದರ ಬಗ್ಗೆ ಮಾಹಿತಿ ದೊರೆತಿಲ್ಲ.ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಆದೇಶಾನುಸಾರ ವಿಡಿಯೊ ಪ್ರಸಾರವನ್ನು ನಿರ್ಬಂಧಿಸಲಾಗಿದೆ.
ವಿದ್ಯಾರ್ಥಿಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ್ದು ತಪ್ಪಾದರೂ, ತಾನು ವಿಕಲಚೇತನಳಾಗಿರುವುದರಿಂದ ಹೀಗೆ ಮಾಡಿಸಿದೆ ಎಂದು ಶಿಕ್ಷಕಿ ತ್ಯಾಗಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿದ್ಯಾರ್ಥಿಗೆ ಹೋಮ್ ವರ್ಕ್ ಮಾಡುವಂತೆ ಸೂಚಿಸಿದ್ದರೂ ಆತ ಅದನ್ನು ಮಾಡಿರಲಿಲ್ಲ. ಆತನ ಬಳಿಗೆ ಹೋಗಲು ನನಗೆ ಸಾಧ್ಯವಾಗಲಿಲ್ಲ. ಆ ಕಾರಣಕ್ಕೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದೆ’ ಎಂದು ತಿಳಿಸಿದರು.
