ಉದಯವಾಹಿನಿ, ಮಾಸ್ಕೊ: ರಷ್ಯಾದ ಖಾಸಗಿ ಸೇನಾ ಪಡೆ ‘ವ್ಯಾಗ್ನರ್‌’ ಗುಂಪಿನ ನಾಯಕ ಯೆವ್ಗೆನಿ ಪ್ರಿಗೋಷಿನ್‌ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಲವು ಶಂಕೆಗಳಿಗೆ ಆಸ್ಪದವಾಗಿದೆ. ಈ ಕೃತ್ಯದ ತನ್ನ ಪಾತ್ರವಿದೆ ಎಂಬ ವದಂತಿಯನ್ನು ರಷ್ಯಾ ಬಲವಾಗಿ ನಿರಾಕರಿಸಿದೆ.
ಆದರೆ, ಬುಧವಾರ ಸಂಭವಿಸಿದ್ದ ವಿಮಾನ ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಕುರಿತಂತೆ ತನಿಖೆಯು ಪ್ರಗತಿಯಲ್ಲಿದೆ ಎಂದೂ ರಷ್ಯಾ ಸರ್ಕಾರ ತಿಳಿಸಿದೆ.
ಅಪಘಾತದ ಹಿಂದೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಪಾತ್ರವಿದೆ ಎಂಬ ಶಂಕೆಯು ವ್ಯಾಪಕವಾಗಿದೆ. ‘ಅದು ಅಪಘಾತವಲ್ಲ, ಹತ್ಯೆ’ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಆದರೆ, ರಷ್ಯಾದ ಆಡಳಿತ ಇದುವರೆಗೂ ಪ್ರಿಗೋಷಿನ್‌ ಅವರ ಸಾವನ್ನು ದೃಢಪಡಿಸಿಲ್ಲ. ‘ಪ್ರಿಗೋಷಿನ್ ಮೃತಪಟ್ಟಿರಬಹುದು ಎಂದು ಭಾವಿಸಲಾಗಿದೆ. ಆದರೆ, ಅವರು ವಿಶೇಷ ಭದ್ರತಾ ವ್ಯವಸ್ಥೆ ಹೊಂದಿದ್ದರು ಎಂಬುದನ್ನು ಗಮನಿಸಬೇಕು’ ಎಂದು ಪುಟಿನ್‌ ಅವರ ವಕ್ತಾರ ಡಿಮಿಟ್ರಿ ಪೆಸ್ಕೊವ್ ಪ್ರತಿಕ್ರಿಯಿಸಿದ್ದಾರೆ.ಪ್ರಿಗೋಷಿನ್‌ ನೇತೃತ್ವದ ವ್ಯಾಗ್ನರ್‌ ಯೋಧರ ಹೋರಾಟವು ಉಕ್ರೇನ್‌, ಆಫ್ರಿಕಾ ಮತ್ತು ಸಿರಿಯಾದಲ್ಲಿ ತೀವ್ರ ಆತಂಕ ಮೂಡಿಸಿತ್ತು. ರಷ್ಯಾದ ನಾಯಕ ಪುಟಿನ್‌ ಅವರ 23 ವರ್ಷದ ಆಡಳಿತಕ್ಕೆ ಸವಾಲೊಡ್ಡುವಂತೆ, ಕಳೆದ ಜೂನ್ ತಿಂಗಳಲ್ಲಿ ವ್ಯಾಗ್ನರ್‌ ಗುಂಪು ಅಲ್ಪಾವಧಿಗೆ ದಂಗೆ ಎದ್ದಿತ್ತು. ಅಮೆರಿಕದ ಗುಪ್ತದಳದ ಪ್ರಾಥಮಿಕ ಅಂದಾಜಿನ ಪ್ರಕಾರ, ಪ್ರಿಗೋಷಿನ್‌ ಅವರು ಪ್ರಯಾಣಿಸುತ್ತಿದ್ದ ವಿಮಾನವನ್ನು ಉದ್ದೇಶಪೂರ್ವಕ ಸ್ಫೋಟದಿಂದ ನೆಲಕ್ಕುರುಳಿಸಲಾಗಿದೆ. ‘ಬಹುಶಃ ಪ್ರಿಗೋಷಿನ್‌ ಅವರನ್ನೇ ಗುರಿಯಾಗಿಸಿ ಇದನ್ನು ನಡೆಸಲಾಗಿದೆ. ಟೀಕಾಕಾರರ ಸದ್ದಡಗಿಸುವ ಧೋರಣೆ ಕುರಿತಂತೆ ಪುಟಿನ್ ಅವರಿಗೆ ದೊಡ್ಡ ಇತಿಹಾಸವೇ ಇದೆ’ ಎಂದು ಗುಪ್ತದಳದ ಅಧಿಕಾರಿಯೊಬ್ಬರು ಹೇಳಿದರು.

 

Leave a Reply

Your email address will not be published. Required fields are marked *

error: Content is protected !!