ಉದಯವಾಹಿನಿ, ಕೋಪೆನ್‌ಹೇಗನ್ : ವಿಶ್ವದ ಅಗ್ರಮಾನ್ಯ ಆಟಗಾರ ವಿಕ್ಟರ್‌ ಅಕ್ಸೆಲ್ಸೆನ್‌ ಅವರನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಎಚ್‌.ಎಸ್‌.ಪ್ರಣಯ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿಕೊಂಡರು. ಆದರೆ ಪದಕದ ಭರವಸೆ ಎನಿಸಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿಗೆ ನಿರಾಸೆ ಎದುರಾಯಿತು. ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೊದಲ ಗೇಮ್‌ ಸೋತರೂ ಅಮೋಘ ರೀತಿಯಲ್ಲಿ ಪುಟಿದೆದ್ದು ನಿಂತ ಪ್ರಣಯ್ 13-21, 21-15, 21-16 ರಿಂದ ಗೆದ್ದು ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟರು.
ಕೇರಳದ 31 ವರ್ಷದ ಪ್ರಣಯ್‌ ಬಿರುಸಿನ ಸ್ಮ್ಯಾಷ್‌, ಆಕರ್ಷಕ ರಿಟರ್ನ್‌ ಮತ್ತು ಡ್ರಾಪ್‌ಶಾಟ್‌ಗಳ ಮೂಲಕ ಹಾಲಿ ಚಾಂಪಿಯನ್‌ ಅಕ್ಸೆಲ್ಸೆನ್‌ ಅವರನ್ನು ನಿಬ್ಬೆರಗಾಗಿಸಿದರು. 68 ನಿಮಿಷಗಳ ಹಣಾಹಣಿಯಲ್ಲಿ ಗೆಲುವು ಒಲಿಸಿಕೊಂಡರು.
ಪ್ರಣಯ್‌ ಅವರು ಈ ವರ್ಷ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಟೂರ್ನಿ ಗೆದ್ದುಕೊಂಡಿದ್ದರಲ್ಲದೆ, ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ‘ರನ್ನರ್ ಅ‍ಪ್‌’ ಆಗಿದ್ದರು.
ಇಲ್ಲಿ ಸೆಮಿ ಪ್ರವೇಶಿಸುವ ಮೂಲಕ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲಿ ಭಾರತಕ್ಕೆ 14ನೇ ಪದಕ ಖಚಿತಪಡಿಸಿಕೊಂಡರು. ಈ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸೋತ ಆಟಗಾರರಿಗೆ ಕಂಚಿನ ಪದಕ ಸಿಗಲಿದೆ.
ಪಿ.ವಿ. ಸಿಂಧು ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಸೇರಿದಂತೆ ಐದು ಪದಕ ಜಯಿಸಿದ್ದಾರೆ. ಸೈನಾ ನೆಹ್ವಾಲ್‌ (ಬೆಳ್ಳಿ ಮತ್ತು ಕಂಚು) ಎರಡು ಪದಕ ಗೆದ್ದಿದ್ದರೆ ಕಿದಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು), ಬಿ.ಸಾಯಿ ಪ್ರಣೀತ್ (ಕಂಚು) ಮತ್ತು ಪ್ರಕಾಶ್‌ ಪಡುಕೋಣೆ (ಕಂಚು) ಅವರು ಸಿಂಗಲ್ಸ್‌ ವಿಭಾಗದಲ್ಲಿ ಪದಕ ಗೆದ್ದ ಇತರರು.
ಪುರುಷರ ಡಬಲ್ಸ್‌ನಲ್ಲಿ ಕಳೆದ ಬಾರಿಯ ಟೂರ್ನಿಯಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಹಾಗೂ 2011 ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಜ್ವಲಾ ಗುಟ್ಟಾ- ಅಶ್ವಿನಿ ಪೊನ್ನಪ್ಪ ಜೋಡಿ ಕಂಚು ಗೆದ್ದುಕೊಂಡಿದ್ದರು.
ಸಾತ್ವಿಕ್‌-ಚಿರಾಗ್‌ಗೆ ನಿರಾಸೆ: ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಜೋಡಿ 18-21, 19-21 ರಿಂದ ಡೆನ್ಮಾರ್ಕ್‌ನ ಕಿಮ್‌ ಆಸ್ಟ್ರಪ್‌- ಆಯಂಡರ್ಸ್ ಸ್ಕಾರುಪ್ ರಸ್ಮುಸೆನ್‌ ಎದುರು ಪರಾಭವಗೊಂಡಿತು.

Leave a Reply

Your email address will not be published. Required fields are marked *

error: Content is protected !!