ಉದಯವಾಹಿನಿ, ಬಾರ್ಸಿಲೋನಾ: ಇತ್ತೀಚೆಗೆ ಸ್ಪೇನ್ ತಂಡ ಮಹಿಳಾ ವಿಶ್ವ ಕಪ್ ಫುಟ್‌ಬಾಲ್ ಗೆದ್ದ ಸಂದರ್ಭದಲ್ಲಿ ಆಟಗಾರ್ತಿ ಜೆನ್ನಿ ಹೆರ್ಮೊಸೊ ಅವರ ತುಟಿಗೆ ಮುತ್ತು ಕೊಟ್ಟ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಲೂಯಿಸ್ ರುಬಿಯೇಲ್ಸ್ ವರ್ತನೆ ‘ಸಮ್ಮತಾರ್ಹವಲ್ಲ’ ಎಂದು ತಂಡದ ಸ್ಟಾರ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾಸ್ ಹೇಳಿದ್ದಾರೆ.ಈ ವರ್ತನೆ ಸ್ವೀಕಾರಾರ್ಹವಲ್ಲ. ನಾವು ನಿಮ್ಮೊಂದಿಗಿದ್ದೇವೆ ಜೆನ್ನಿ ಹೆರ್ಮೊಸಾ’ ಎಂದು ಪುಟೆಲ್ಲಾಸ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಆಟಗಾರ್ತಿ ತುಟಿಗೆ ಚುಂಬಿಸಿ ವಿವಾದ ಮೈಗೆಳೆದುಕೊಂಡ ಲೂಯಿಸ್ ರುಬಿಯೇಲ್ಸ್ ಅವರು ತಾವು ಸ್ಪೇನ್ ಫುಟ್‌ಬಾಲ್ ಮುಖ್ಯಸ್ಥ ಸ್ಥಾನ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ದೇಶದ ಸಚಿವರು, ಕ್ರೀಡಾ ಕ್ಷೇತ್ರದ ಗಣ್ಯರಿಂದ ಟೀಕೆಗೊಳಗಾದ ಕಾರಣ 46 ವರ್ಷದ ರುಬಿಯೇಲ್ಸ್ ರಾಜೀನಾಮೆ ನೀಡಬಹುದೆಂಬ ನಿರೀಕ್ಷೆಗಳಿದ್ದವು.’ನನ್ನ ಚಾರಿತ್ರ್ಯಹನನದ ಪ್ರಯತ್ನಗಳು ನಡೆಯುತ್ತಿವೆ. ಅದು ಉದ್ದೇಶಪೂರ್ವಕ ಚುಂಬನ ಅಲ್ಲ. ಸಂಭ್ರಮದ ಗಳಿಗೆಯಲ್ಲಿ ಆಗಿಹೋಗಿದ್ದು. ಆಕೆಯೂ ನನ್ನನ್ನು ಸೆಳೆದಿದ್ದಳು. ಈ ಚುಂಬನವನ್ನು ಲೈಂಗಿಕ ದೌರ್ಜನ್ಯಕ್ಕೆ ಹೋಲಿಸಬಾರದು’ ಎಂದಿದ್ದಾರೆ.
