ಉದಯವಾಹಿನಿ, ಬಾಕು (ಅಜರ್‌ಬೈಜಾನ್): ತಿಯಾನಾ, ಸಾಕ್ಷಿ, ಸೂರ್ಯವಂಶಿ ಮತ್ತು ಕಿರಣ್‌ದೀಪ್ ಕೌರ್ ಅವರನ್ನು ಒಳಗೊಂಡ ಭಾರತ ಮಹಿಳೆಯರ ತಂಡ ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಷಿಪ್‌ನ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಶುಕ್ರವಾರ ಚಿನ್ನದ ಪದಕ ಗೆದ್ದುಕೊಂಡಿತು. ಭಾರತ ತಂಡದ ಸ್ಪರ್ಧಿಗಳು ಒಟ್ಟು ಆರು ಚಿನ್ನ ಮತ್ತು ಎಂಟು ಕಂಚಿನ ಪದಕಗಳೊಡನೆ ಈ ಚಾಂಪಿಯನ್‌ಷಿಪ್ ಮುಗಿಸಿದರು. ಪದಕ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನ ಪಡೆದರೆ, 14 ಪದಕಗಳನ್ನು ಗೆದ್ದ ಭಾರತ ಎರಡನೇ ಸ್ಥಾನ ಪಡೆಯಿತು. ಭಾರತದ ನಾಲ್ವರು ಈ ಕೂಟದಲ್ಲಿ ಉತ್ತಮ ಸಾಧನೆ ತೋರಿ ಒಲಿಂಪಿಕ್ಸ್‌ಗೆ ಕೋಟಾ ಗಿಟ್ಟಿಸಿಕೊಂಡರು.
ಪಿಸ್ತೂಲ್ ಟೀಮ್ ಸ್ಪರ್ಧೆಯಲ್ಲಿ ವಿಜೇತರಾದ ಭಾರತದ ವನಿತೆಯರು 1,573 ಪಾಯಿಂಟ್ಸ್ ಕಲೆಹಾಕಿದರೆ, ಚೀನಾ ತಂಡ 1,567 ಮತ್ತು ಮಂಗೋಲಿಯಾ ತಂಡ 1,566 ಪಾಯಿಂಟ್ಸ್ ಕಲೆಹಾಕಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದವು. ನಂತರ ತಿಯಾನಾ ಮಹಿಳೆಯರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ವೈಯಕ್ತಿಕ ಸ್ಪರ್ಧೆಯಲ್ಲಿ ತಿಯಾನಾ 533 ಪಾಯಿಂಟ್ಸ್ ಗಳಿಸಿದರು. ಸಾಕ್ಷಿ (531) ಮತ್ತು ಕಿರಣ್‌ದೀಪ್ (509) ಕ್ರಮವಾಗಿ ಐದು ಮತ್ತು 11ನೇ ಸ್ಥಾನ ಗಳಿಸಿದರು.
