ಉದಯವಾಹಿನಿ, ಮುದ್ದೇಬಿಹಾಳ : ಸಂಘಟನೆಯ ಮೂಲಕವೇ ಇತರೆ ಸಮಾಜದವರಿಗೂ ಮಾದರಿ ಆಗುವ ಕೆಲಸ ನಾವು ಮಾಡೋಣ.ಬಸವಣ್ಣನವರಿಗಿಂತಲೂ ಮೊದಲು ಆಗಿ ಹೋಗಿರುವ ದೇವರ ದಾಸಿಮಯ್ಯನವರ ವಚನಗಳ ಅರ್ಥ ಸಹಿತ ವಿಶ್ಲೇಷಣೆ ಕುರಿತಾದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲು ಸಹಕಾರ ನೀಡುವುದಾಗಿ ಬಾಗಲಕೋಟ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಹೇಳಿದರು. ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ನಗರ ದೇವಾಂಗ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಸಲುವಾಗಿ ತೊಂದರೆಯಾದರೆ ಅಂತವರ ನೆರವಿಗೆ ಸಮಾಜ ಮುಂಬರುವ ದಿನಗಳಲ್ಲಿ ಬರುವ ಕಾರ್ಯ ಮಾಡಲಿದೆ.ದೇವಾಂಗ ಸಮಾಜದಲ್ಲಿ ಜ್ಞಾನವಂತರು, ಪ್ರತಿಭಾವಂತರಿದ್ದರೂ ಹಿಂಜರಿಕೆಯ ಸ್ವಭಾವದಿಂದ ಸಮಾಜದ ಎದುರಿಗೆ ತಮ್ಮ ಪ್ರತಿಭೆ,ಸಾಮರ್ಥ್ಯ ಪ್ರದರ್ಶನಕ್ಕೆ ಹಿಂದೇಟು ಹಾಕುವ ಸ್ವಭಾವವನ್ನು ತೊರೆಯಬೇಕು ಎಂದರು. ಸಮಾಜದ ಪ್ರತಿಭೆಗಳು ಅಳುಕಿಲ್ಲದೇ ಪ್ರತಿಭೆ ತೋರ್ಪಡಿಸಿ ಸಾಧನೆಯ ಗುರಿ ತಲುಪಬೇಕು ಎಂದು ಹೇಳಿದರು.ಶಿಕ್ಷಕ ಜಿ.ಟಿ.ಮಂಗಳೂರು ಉಪನ್ಯಾಸ ನೀಡಿ,ದೇವರದಾಸಿಮಯ್ಯನವರು ಆದ್ಯ ವಚನಕಾರರು.ಅವರ ವಚನಗಳ ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ.ಅವರ ವಚನಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು.ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿ ಎಂದರು. ಸನ್ಮಾನಿತರ ಪರ ಡಾ.ಐಶ್ವರ್ಯಾ ಗುಡ್ಡದ ಮಾತನಾಡಿ, ಬಡವರ ಸೇವೆ ಮಾಡಬೇಕು ಎಂಬುದು ನನ್ನ ಇಚ್ಛೆಯಾಗಿದೆ.ಸಮಾಜದಿಂದ ಗೌರವ ಸಿಕ್ಕಿರುವುದು ಸಂತಸ ತಂದಿದೆ.ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಇನ್ನಷ್ಟು ಸೇವೆ ಮಾಡುವ ಕಾರ್ಯ ಮಾಡುತ್ತೇನೆ ಎಂದರು.
ದೇವಾಂಗ ಸಮಾಜದ ಮುಖಂಡರಾದ ಬಸಪ್ಪ ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು.ಸಮಾಜದ ಪ್ರಮುಖರಾದ ಚನ್ನಬಸ್ಸು ಗುಡ್ಡದ,ಅಮರೇಶ ಡಂಬಳ,ಸಿದ್ದಣ್ಣ ಚಿತ್ತರಗಿ,ಮುತ್ತಣ್ಣ ಪ್ಯಾಟಿಗೌಡರ,ನಾಗಪ್ಪ ಅಗಸಬಾಳ,ಪತ್ರಕರ್ತ ಶಂಕರ ಹೆಬ್ಬಾಳ,ಯುವ ಘಟಕದ ಅಧ್ಯಕ್ಷ ಶಿವು ಪ್ಯಾಟಿಗೌಡರ,ಬಸಪ್ಪ ಬೇನಾಳ,ಸುರೇಶ ಆಲೂರ ಹಾಗೂ ದೇವಾಂಗ ಸಮಾಜದ ಬಾಂಧವರು ಇದ್ದರು.
ಉಪನ್ಯಾಸಕ ವಿ.ವಿ.ಮಾಶೆಟ್ಟಿ, ಸ್ವಾಗತಿಸಿದರು.ಶ್ರೀಶೈಲ್ ಮುದ್ದೇಬಿಹಾಳ ನಿರೂಪಿಸಿದರು.ಶ್ರೀಶೈಲ್ ಭಾವಿಕಟ್ಟಿ ವಂದಿಸಿದರು.ಇದಕ್ಕೂ ಮುನ್ನ ದೇವರದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ: ೨೦೨೧-೨೨ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಆದರ್ಶ ಮುದ್ದೇಬಿಹಾಳ,ಅನಿಕತೇಜ ಪ್ಯಾಟಿಗೌಡರ,ಪಿಯುಸಿ ವಿಭಾಗದಲ್ಲಿ ಗಿರಿಧರ್ ಮಂಗಳೂರು,ಶರಣಬಸವರಾಜ ಡಂಬಳ ಅವರಿಗೆ ಪ್ರತಿಭಾ ಪುರಸ್ಕಾರ,ನಗದು ಬಹುಮಾನ ನೀಡಲಾಯಿತು.ಬಾಗಲಕೋಟ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ನೇಮಕವಾದ ಎಂ.ಎಸ್.ಬಡದಾನಿ,ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆ ತೋರಿದ ಡಾ.ಐಶ್ವರ್ಯಾ ಗುಡ್ಡದ,ಪ್ಯಾರಾಮೆಡಿಕಲ್ ಶಿಕ್ಷಣದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಐಶ್ವರ್ಯಾ ಪ್ಯಾಟಿಗೌಡರ,ಕಾಯಕ ರತ್ನ ಪ್ರಶಸ್ತಿ ಪಡೆದ ಶಿಕ್ಷಕಿ ಕಸ್ತೂರಿ ಗದ್ದೆಪ್ಪನವರ,ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿಜಯಲಕ್ಷ್ಮಿ ಪ್ಯಾಟಿಗೌಡರ,ನಲಿಕಲಿ ವಿಭಾಗದಲ್ಲಿ ರಾಜ್ಯಪ್ರಶಸ್ತಿ ಪಡೆದ ಸವಿತಾ ಪ್ಯಾಟಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
