ಉದಯವಾಹಿನಿ, ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ತಿಳಿಸಿದ್ದಾರೆ.
ಜಿಲ್ಲೆಯ ತಿತಿಮತಿ ಅರಣ್ಯ ವ್ಯಾಪ್ತಿಯ ಚೈನಿಹಡ್ಲು ಹಾಡಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಆದಿವಾಸಿ ಜನರ ಅಹವಾಲು ಆಲಿಸಿದ ನಂತರ ಸಚಿವರು ಮಾತನಾಡಿದರು.
ಕಾಡಾನೆ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಣ ಮಾಡುವಲ್ಲಿ ತಿತಿಮತಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ೫ ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ಕೊಡಗು ಜಿಲ್ಲೆಯಲ್ಲಿ ಕಳೆದ ೧೫ ದಿನಗಳಲ್ಲಿ ಮೂವರು ಕಾಡಾನೆ ಹಾವಳಿಗೆ ತುತ್ತಾಗಿದ್ದಾರೆ. ಮಾನವ ಮತ್ತು ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಯುವಲ್ಲಿ ಶಾಶ್ವತ ಕಾರ್ಯಕ್ರಮ ರೂಪಿಸಲಾಗುವುದು,
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕಾಡಾನೆ ಹಾವಳಿಯಿಂದ ಇಲ್ಲಿನ ಸ್ಥಳೀಯರು ತುಂಬಾ ತೊಂದರೆಪಡುತ್ತಿದ್ದಾರೆ. ಆದ್ದರಿಂದ ಕೊಡಗು ಜಿಲ್ಲೆಗೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅರಣ್ಯ ಸಚಿವರಲ್ಲಿ ಮನವಿ ಮಾಡಲಾಗಿತ್ತು, ಅದರಂತೆ ಇಂದು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದರು. ಈಗಾಗಲೇ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲಾಗಿದ್ದು, ಕೊಳವೆ ಬಾವಿ ಕೊರೆಸಬೇಕು. ಕೃಷಿ ಚಟುವಟಿಕೆಗೆ ಅವಕಾಶ ಮಾಡಬೇಕು. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಹಲವು ಸೌಲಭ್ಯಗಳು ದೊರೆಯಬೇಕು ಎಂದು ಪಂಕಜ ಅವರು ಮನವಿ ಮಾಡಿದರು.
ಅರಣ್ಯ ಹಕ್ಕುಪತ್ರ ಪಡೆದಿರುವವರು ಉಳುಮೆ ಮಾಡಲು ಯಾವುದೇ ರೀತಿಯ ತೊಂದರೆ ಇಲ್ಲ, ಜೊತೆಗೆ ಅಭಿವೃದ್ಧಿ ನಿಗಮದಿಂದ ಹಲವು ಸೌಲಭ್ಯ ಪಡೆಯಲು ಅರಣ್ಯ ಅಧಿಕಾರಿಗಳು ಹಾಗೂ ವಿವಿಧ ಅಭಿವೃದ್ಧಿ ನಿಗಮದ ಮುಖ್ಯಸ್ಥರ ಜೊತೆ ಚರ್ಚಿಸಿ, ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕ ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್, ಅರಣ್ಯ ಕಾರ್ಯಪಡೆಯ ಮುಖ್ಯಸ್ಥರಾದ ರಾಜೀವ ರಂಜನ್, ಮುಖ್ಯ ವನ್ಯಜೀವಿ ಪರಿಪಾಲಕರಾದ ಶುಭಾಷ್, ನಾಗರಹೊಳೆ ಹುಲಿ ವಿಭಾಗದ ನಿರ್ದೇಶಕರಾದ ಹರ್ಷ, ಜಿ.ಪಂ.ಸಿಇಇಒ ವರ್ಣಿತ್ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪೂವಯ್ಯ, ಶಿವರಾಮ್ ಬಾಬು, ಶರಣಬಸಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ರಾಮಚಂದ್ರ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!