ಉದಯವಾಹನಿ,ಚಂಡೀಗಢ: ಚಿಕ್ಕ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ತಮ್ಮ ಸಮಯವನ್ನು ಸೋಮಾರಿತನದಿಂದಲೇ ಕಳೆಯುತ್ತಾರೆ. ಆದರೆ, ಎಂಟು ವರ್ಷದ ಪಂಜಾಬ್‌ನ ಬಾಲಕಿಯೊಬ್ಬಳು ಪರ್ವತಾರೋಹಣ ಮಾಡುವ ಮೂಲಕ ಸಾಧನೆಗಳ ಶಿಖರವನ್ನೇ ಏರಿದ್ದಾಳೆ.
ಇಂಥ ಸಾಧನೆಗಳ ಉತ್ತುಂಗಕ್ಕೇರಿದ ಬಾಲಕಿ ಹೆಸರು ಸಾನ್ವಿ ಸೂದ್.ಪಂಜಾಬ್‌ನ ರೂಪನಗರ ಜಿಲ್ಲೆಯ ನಿವಾಸಿ.’ಸಾನ್ವಿ ಕಳೆದ ವರ್ಷ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬಂದಿದ್ದಾಳೆ. ಆಗ ಆಕೆಯ ವಯಸ್ಸು ಏಳು ವರ್ಷ. ಇಂಥದ್ದೊಂದು ಸಾಧನೆ ಮಾಡಿದ ದೇಶದ ಅತ್ಯಂತ ಕಿರಿಯ ವಯಸ್ಸಿನ ಚಾರಣಗಾರ್ತಿ ಸಾನ್ವಿ’ ಎಂದು ಆಕೆಯ ತಂದೆ ದೀಪಕ್ ಸೂದ್ ಹೆಮ್ಮೆಯಿಂದ ಹೇಳುತ್ತಾರೆ. ‘ಅಲ್ಲದೇ, 2022ರ ಜುಲೈನಲ್ಲಿ ಆಫ್ರಿಕಾದ ಅತಿ ಎತ್ತರದ ಪರ್ವತ ಕಿಲಿಮಂಜಾರೊವನ್ನೂ ಈಕೆ ಏರಿದ್ದಳು. ಆಗ, ಕಿಲಿಮಂಜಾರೊ ಪರ್ವತ ಏರಿದ ಏಷ್ಯಾದ ಅತ್ಯಂತ ಕಿರಿಯ ಬಾಲಕಿ ಎಂಬ ಗೌರವಕ್ಕೆ ಸಾನ್ವಿ ಭಾಜನಳಾಗಿದ್ದಳು. ಈ ವರ್ಷದ ಮೇ ತಿಂಗಳಲ್ಲಿ ಆಸ್ಟ್ರೇಲಿಯಾದ ಕೊಸ್ಸಿಯುಸ್ಕೊ ಪರ್ವತ, ಜುಲೈ ತಿಂಗಳಿನಲ್ಲಿ ರಷ್ಯಾದ ಎಲ್ಬರ್ಸ್ ಪರ್ವತವನ್ನು ಆರೋಹಣ ಮಾಡಿ, ಇಂಥ ಸಾಧನೆ ಮಾಡಿದ ಜಗತ್ತಿನ ಕಿರಿಯ ಬಾಲಕಿ ಎಂಬ ಮನ್ನಣೆಗೆ ಸಾನ್ವಿ ಪಾತ್ರಳಾಗಿದ್ದಾಳೆ. ಮುಂದೆಯೂ ಪರ್ವಾತಾರೋಹಣ ಮುಂದುವರಿಸುತ್ತಾಳೆ’ ಎಂದರು.
