ಉದಯವಾಹಿನಿ ಮಸ್ಕಿ: ಸಕಾಲಕ್ಕೆ ಮಳೆ ಬಾರದೇ ತೊಗರಿ ಬೆಳೆ ಬಾಡುವ ಹಂತಕ್ಕೆ ತಲುಪಿದ್ದು, ಮಳೆಗಾಗಿ ರೈತನ ಚಿತ್ತ ಆಕಾಶದತ್ತ ನೆಟ್ಟಿದೆ. ತಾಲೂಕಿನ ಮಾರಲದಿನ್ನಿ, ಮಟ್ಟೂರು, ಅಂಕುಶದೊಡ್ಡಿ, ಸಂತೆಕೆಲ್ಲೂರು, ಮೆದಕಿನಾಳ, ಕನ್ನಾಳ, ಅಡವಿಭಾವಿ ಗ್ರಾಪಂ ವ್ಯಾಪ್ತಿಯಲ್ಲಿನ ಅನೇಕ ಗ್ರಾಮಗಳು ಮಳೆಯಾಶ್ರಿತ ಪ್ರದೇಶಗಳಾಗಿದ್ದು, ಮಳೆಯನ್ನೆ ನಂಬಿ ರೈತ ಹೊಲ ಹಸನು ಮಾಡಿ ತೊಗರಿ ಬೆಳೆ ಬಿತ್ತನೆ ಮಾಡಿದ್ದು, ಬಿತ್ತನೆ ಕೈಗೊಂಡ ಕೆಲ ದಿನಗಳ ಬಳಿಕ ಮಳೆರಾಯ ಕಣ್ತೇರೆದರಿಂದ ರೈತಾಪಿ ವರ್ಗ ಬೆಳೆಗೆ ಏಡಿ ಕುಂಟಿ, ಗೊಬ್ಬರ ಹಾಕಿ ಬೆಳೆಯಲ್ಲಿ ಕಳೆ ತಗೆಸಿದ್ದು, ಇದೀಗ ಮಳೆ ಸರಿಯಾದ ಸಮಯಕ್ಕೆ ಬರದೇ ಇರುವುದರಿಂದ ತೊಗರಿ ಬೆಳೆ ಬಾಡುವ ಹಂತಕ್ಕೆ ಬಂದು ತಲುಪಿದೆ. ತೊಗರಿ ಬೆಳೆಗೆ ನೀರು ಪೂರೈಸಲು ಬೊರವೆಲ್ ಕೊರತೆ ಇದ್ದು, ಇತ್ತ ಮಳೆಯೂ ಬರುತ್ತಿಲ್ಲ, ತೇವಾಂಶದ ಕೊರತೆಯಿಂದ ತೊಗರಿ ಗಿಡದಲ್ಲಿನ ಎಲೆಗಳು ಉದುರುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕೃಷಿ ಕೆಲಸ ಕೈಗೊಂಡು ಬಿತ್ತನೆ ಮಾಡಿದ ತೊಗರಿ ಬೆಳೆ ಕಂಡು ರೈತ ಕಣ್ಣೀರುಡುತ್ತಿದ್ದಾನೆ. ಮಳೆ ಯಾವಾಗ ಬರುವುದೆಂದು ರೂತರು ನಿತ್ಯವೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಂದಿರುವುದಿAದ ಒಂದು ಭಾರಿಯೂ ಹಳ್ಳ ಹರಿದು ಬಂದಿಲ್ಲ. ಇದರಿಂದ ಈ ಭಾಗದ ಜೀವನಾಡಿಯಾಗಿರುವ ಮಾರಲದಿನ್ನಿ ಡ್ಯಾಂನಲ್ಲಿ ನೀರು ಹರಿದು ಬಂದಿಲ್ಲ ಭತ್ತ ನಾಟಿ ಮಾಡುವ ರೈತ ನಾಟಿ ಮಾಡದೇ ಬರಿಗೈಯಲ್ಲಿ ಕುಳಿತುಕೊಳ್ಳುವಂತಾಗಿದೆ. ಮಳೆ ಕೊರತೆಯಿಂದ ಮೇವು ಒಣಗಿ ಹೋಗುತ್ತಿದ್ದು, ಹಳ್ಳ,ಕೊಳ್ಳ ಬತ್ತಿ ಜನಜಾನುವಾರು ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರಿನ ಅಭಾವ ಎದುರಾಗುವ ಪ್ರಸಂಗ ಬರುತ್ತದೆ. ಮಳೆರಾಯ ಧರಗೆ ಇಳಿಯುವಂತೆ ಈ ಭಾಗದ ರೈತರು ಪ್ರಾರ್ಥಿಸುತ್ತಿದ್ದಾನೆ.
