
ಉದಯವಾಹಿನಿ ಚಿಂತಾಮಣಿ:ತಾಲೂಕಿನಲ್ಲಿ ಇತ್ತೀಚೆಗೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಹಲವಾರು ಗ್ರಾಮಗಳಲ್ಲಿ ಬೆಳೆಗಳು ಒಣಗಿ ನಾಶವಾಗಿ ರೈತ ನಷ್ಟಕ್ಕೆ ಒಳಗಾಗಿದ್ದು ಸರಕಾರ ಕೂಡಲೇ ಸ್ಥಳ ತನಿಖೆ ಮಾಡಿ ಪರಿಹಾರ ನೀಡಬೇಕೆಂದು ಅಂಬಾಜಿ ದುರ್ಗಾ ಹೋಬಳಿಯ ಚಾಂಡ್ರಹಳ್ಳಿ,ರಾಯಪ್ಪಲ್ಲಿ,ಗ್ರಾಮದ ರೈತರು ಆಗ್ರಹಿಸಿದ್ದಾರೆ.ಬಹುತೇಕ ಬೆಳೆಗಳನ್ನು ರೈತರು ಇಟ್ಟಿದ್ದು ಇತ್ತೀಚೆಗೆ ಮಳೆ ಇಲ್ಲದೆ ಸಂಪೂರ್ಣ ಬೆಳೆ ಒಣಗಿ ನಾಶವಾಗಿದೆ.ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಪರಿಹಾರ ಕೊಡಿಸಲು ಮುಂದಾಗಬೇಕು.ಮಳೆ ಇಲ್ಲದ ಕಾರಣ ಯಾವುದೇ ಬೆಳೆಗಳು ರೈತರ ಕೈಗೆ ಸಿಕ್ಕಿರುವುದಿಲ್ಲ.ಆದರೆ ಈ ಬಾರಿ ಮುಂಗಾರು ಅಲ್ಪ ಸ್ವಲ್ಪ ಬಿದ್ದ ಕಾರಣ ಎಲ್ಲಾ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ.ಆದರೆ ಇದೀಗ ಮಳೆ ಇಲ್ಲದೆ ಪೂರ್ಣವಾಗಿ ಒಣಗಿ ನಾಶವಾಗಿದೆ ಎಂದು ರೈತರದ ಶಿವಾನಂದ ರೆಡ್ಡಿ, ಅಶೋಕ್ ರೆಡ್ಡಿ,ಜಯರಾಮರೆಡ್ಡಿ, ಆಂಜನಪ್ಪ,ತಿಳಿಸಿದರು.ಬೆಳೆಗಳು ಒಣಗಿ ನಾಶವಾಗುತ್ತಿರುವ ಬಗ್ಗೆ ತಾಲೂಕಿನ ಕೃಷಿ, ತೋಟಗಾರಿಕೆ, ರೇಷ್ಮೆ ಅಧಿಕಾರಿಗಳು, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳೂ ಇದುವರೆಗೂ ಧ್ವನಿ ಎತ್ತಿಲ್ಲ. ಸರಕಾರಕ್ಕೆ ಯಾವುದೇ ಪ್ರಸ್ತಾಪ ಸಲ್ಲಿಲ್ಲವೆಂದು ದೂರಿದ ಅವರು, ಇನ್ನಾದರೂ ಎಲ್ಲರೂ ಎಚ್ಚೆತ್ತುಕೊಂಡು ಬೆಳೆ ನಷ್ಟ ಪರಿಹಾರ ಕೊಡಿಸಲು ಮುಂದಾಗುವಂತೆ ಕೋರಿದರು.ಬೆಳೆ ಒಣಗಿ ಹೋಗುತ್ತಿದ್ದು ರೈತರು ದಿಕ್ಕು ತೋಚದಂತಾಗಿದ್ದಾರೆ. ಇನ್ನು ಪಂಪ್ಸೆಟ್ಗಳಲ್ಲಿನ ನೀರು ಬಳಸಿಕೊಂಡು ಬೆಳೆ ತೆಗೆಯಲು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಅದು ಸಹ ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ತಾಲೂಕಿನಲ್ಲಿ ಈ ಬಾರಿ ಎಷ್ಟು ಬಿತ್ತನೆ : ಈ ಬಾರಿ 34,167 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಹೊಂದಿದ್ದರು ಸಕಾಲದಲ್ಲಿ ಮಳೆ ಆಗದ ಪರಿಣಾಮ ಇಲ್ಲಿವರೆಗೂ ಕೇವಲ ತಾಲೂಕಿನಲ್ಲಿ 11,117 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು ಶೇಕಡ 32. ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿದೆ. ತಾಲೂಕಿನಲ್ಲಿ ಈ ಬಾರಿ 16,190 ಹೆಕ್ಟರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಹೊಂದಿದ್ದರು ಇಲ್ಲಿವರೆಗೂ 3,190 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಮುಸುಕಿನ ಜೋಳ ಒಟ್ಟು 4,330 ಪೈಕಿ ಕೇವಲ 2,315 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ತೊಗರಿ ಬೆಳೆ 2,375 ಹೆಕ್ಟರ್ ಗುರಿ ಪೈಕಿ ಕೇವಲ 467 ಹೆಕ್ಟರ್. ಅವರೆ 1,100 ಹೆಕ್ಟರ್ ಗುರಿ ಪೈಕಿ 400 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಅತಿ ಹೆಚ್ಚು ಬೆಳೆಯುವ ಶೇಂಗಾ ಈ ಬಾರಿ ಒಟ್ಟು 8,250 ಹೆಕ್ಟರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ತಿಳಿದುಬಂದಿದೆ.
