ಉದಯವಾಹಿನಿ ಪಾವಗಡ: ರಾಜ್ಯ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀಗೆ ಬುಧವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ನೀಡುವ ಕಾರ್ಯಕ್ರಮವನ್ನು ವೀಕ್ಷಿಸಲು ಪಟ್ಟಣದ ಎಸ್.ಎಸ್.ಕೆ ಬಯಲು ರಂಗಮಂದಿರದಲ್ಲಿ ನೇರ ಪ್ರಸಾರವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಹೆಚ್.ವಿ.ವೆಂಕಟೇಶ್, ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣೆಗೂ ಮುನ್ನ ನೀಡಿದ ಗ್ಯಾರಂಟಿ ಭರವಸೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಮನೆ ಯಜಮಾನಿಯ ಕೈಗೆ ಸಿಗುವ ರೂ.2 ಸಾವಿರ ಕುಟುಂಬ ನಿರ್ವಹಣೆಯ ಭಾರವನ್ನು ಇಳಿಸಲಿದೆ. ಮಹಿಳಾ ಸಬಲೀಕರಣಕ್ಕೆ ಇದೊಂದು ಮಹತ್ತರ ಹೆಜ್ಜೆಯಾಗಲಿದೆ. ಮಹಿಳೆಯರು ‘ಗೃಹಲಕ್ಷ್ಮೀ’ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವ ‘ಯುವ ನಿಧಿ’ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ.ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.ಅನ್ನಭಾಗ್ಯ ಯೋಜನೆಯು ಸಹ ಲಕ್ಷಾಂತರ ಮಂದಿಯ ಜೀವನಕ್ಕೆ ಆಧಾರವಾಗಿದ್ದು, ಇದರಿಂದ ಬಡವರ ಹಾಗೂ ಮಧ್ಯಮ ವರ್ಗದವರ ಜೀವನ ಮಟ್ಟ ಸುಧಾರಣೆಯಾಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಅಭೂತಪೂರ್ವವಾದ ಬೆಂಬಲ ದೊರೆತಿದ್ದು, ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಡಿಪಿಒ ನಾರಾಯಣ, ತಾಲ್ಲೂಕಿನಲ್ಲಿ ಒಟ್ಟು 60116 ಪಡಿತರ ಚೀಟಿ ಕುಟುಂಬಗಳಿದ್ದು ಇದರಲ್ಲಿ ಗೃಹಲಕ್ಷ್ಮೀ ಯೋಜನೆಗೆ ನಗರ 5286 ಗ್ರಾಮೀಣ 46691 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ನಗರ 1091 ಗ್ರಾಮೀಣ 7048 ಬಾಕಿ ಅರ್ಜಿಗಳು ಸಲ್ಲಿಕೆಯಾಗಬೇಕಾಗಿದೆ ಎಂದು ಮಾಹಿತಿ ನೀಡಿದರು. ತಾಲ್ಲೂಕಿನ 34 ಗ್ರಾ.ಪಂ.ಕೇಂದ್ರ ಕಛೇರಿಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ, ತಹಶೀಲ್ದಾರ್ ಡಿ.ಎನ್.ವರದಾರಾಜು, ಇಒ ಕೆ.ಒ.ಜಾನಕಿರಾಮ್, ಪ್ರಭಾರ ಮುಖ್ಯಾಧಿಕಾರಿ ಶಂಷುದ್ದೀನ್, ಎಸಿಡಿಪಿಒ ರಕೀಬ್ ಉಲ್ಲಾ, ಪುರಸಭೆ ಮಾಜಿ ಅಧ್ಯಕ್ಷ ಗುರ್ರಪ್ಪ, ವೆಂಕಟರಾಮರೆಡ್ಡಿ, ಪುರಸಭೆ ಸದಸ್ಯರಾದ ಸುದೇಶ್ ಬಾಬು, ಪಿ.ಹೆಚ್.ರಾಜೇಶ್, ರವಿ, ರಾಮಾಂಜಿನಪ್ಪ, ವೇಲುರಾಜು, ಬಾಲ ಸುಬ್ರಮಣ್ಯಂ, ಮೊಹಮ್ಮದ್ ಇಮ್ರಾನ್, ಗೊರ್ತಿ ನಾಗರಾಜು, ಧನಲಕ್ಷ್ಮೀ, ಮಾಲಿನ್ ತಾಜ್, ಲಕ್ಷ್ಮೀದೇವಿ, ಜಿ.ಉಮಾದೇವಿ, ಸುಧಾಲಕ್ಷ್ಮೀ, ಗೀತಾ, ಗಂಗಮ್ಮ, ಅನ್ನಪೂರ್ಣ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!