ಉದಯವಾಹಿನಿ,ಶಿಡ್ಲಘಟ್ಟ: ಮಳೆಗಾಗಿ ಗಂಡು ಮಗುವಿಗೆ ಹೆಣ್ಣಿನ ವೇಷ ಹಾಕಿಸಿ ಮಕ್ಕಳ ಅಣಕು ಮದುವೆ ಮಾಡಿಸಿರೋ ಘಟನೆ ಶಿಡ್ಲಘಟ್ಟ ತಾಲೂಕಿನ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕತೇಕಹಳ್ಳಿ ಗ್ರಾಮದ ಮದ್ಯಭಾಗದ ರಸ್ತೆಯ ಮೇಲೆಯೇ ಮದುವೆ ತಯಾರಿ ನಡೆಸಿ, ಗ್ರಾಮದ ಇಬ್ಬರು ಬಾಲಕರಲ್ಲಿ ಒಬ್ಬ ಹುಡುಗನಿಗೆ ವಧುವಿನ ವೇಷ ಹಾಕಿ, ಮತ್ತೋರ್ವ ಹುಡುಗನಿಗೆ ವರನ ಪೋಷಾಕು ಹಾಕಿ, ಹುಡುಗನಿಗೆ ಪೇಟ, ಬಾಸಿಂಗ ಕಟ್ಟಿ ,ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಅಲಂಕಾರ ಮಾಡಿ, ಬಾಸಿಂಗ ಕಟ್ಟಿ ಶಾಸ್ತ್ರೋಕ್ತವಾಗಿ ಗ್ರಾಮಸ್ಥರು ಮುಂದೆ ನಿಂತು ಆರ್ಚಕರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ಅಣಕು ಮದುವೆ ಮಾಡುವ ಮೂಲಕ ಮಳೆಗಾಗಿ ಮೊರೆಯಿಟ್ಟಿದ್ದಾರೆ. ಈ ರೀತಿ ಮದುವೆ ಮಾಡಿದ್ರೆ ಮಳೆಯಾಗುತ್ತೆ’ ಎಂಬುವುದು ಈ ಗ್ರಾಮದ ಜನರ ನಂಬಿಕೆ, ನಿಜವಾದ ಮದುವೆಯಲ್ಲಿ ಒಂದು ಗಂಡು-ಹೆಣ್ಣಿಗೆ ಯಾವ ರೀತಿ ಮದುವೆ ಮಾಡುತಾರೋ ಅದೇ ರೀತಿ ಶಾಸ್ತ್ರೋಕ್ತವಾಗಿ ಗ್ರಾಮದ ಜನರೆಲ್ಲಾ ಸೇರಿ ಚಪ್ಪರ ಹಾಕಿ, ಹಸೆ ಬರೆದು, ಅರಿಷಿಣ ಹಚ್ಚಿ ವಿವಿಧ ಶಾಸ್ತ್ರಗಳನ್ನು ಮಾಡಿ ವರನ ಪೋಷಾಕಿನಲ್ಲಿದ್ದ ಬಾಲಕ ವಧು ವೇಷದಲ್ಲಿದ್ದ ಮತ್ತೋರ್ವ ಬಾಲಕನಿಗೆ ಅರಿಶಿನ ಕೊಂಬು (ತಾಳಿ) ಕಟ್ಟುವ ಮೂಲಕ ಮದುವೆ ಮಾಡಿಸಿದ್ದಾರೆ. ಮದುವೆಯ ನಂತರ ವಸಿಕೆಗೆ ತಯಾರು ಮಾಡುವ ರೀತಿಯಲ್ಲಿಯೇ ಹಣ್ಣು- ಹಂಪಲು, ಮಿಠಾಯಿ, ಸಿಹಿ ತಿಂಡಿ, ರಾರಾ ತಿ೦ಡಿ ಮತ್ತಿತರ ವಸಿಕ ಸಾಮಗ್ರಿಗಳನ್ನು ಇಟ್ಟು, ಗ್ರಾಮಸ್ಥರೆಲ್ಲಾ ಸೇರಿ ನೂತನ ವಧು ವರರಿಗೆ ಉಡುಗೊರೆ(ಮುಖ್ಯ) ನೀಡಿದರು.
ಈ ವೇಳೆ ಗ್ರಾಮದ ಮಧ್ಯಭಾಗದ ಬೀದಿಯಲ್ಲಿ ಮಹಿಳೆಯರಲ್ಲ ಕೂತು ಸೋಬಾನೆ ಗೀತೆ ಹಾಡಿದರೆ, ಹೆಂಗಳೆಯರು ಸಿನಿಮಾ ಹಾಡುಗಳನ್ನಾಡಿ ಸಂಭ್ರಮಿಸಿದರು. ನಂತರ ಎಲ್ಲರೂ ಸೇರಿ ಸಹ ಭೋಜನ ನಡೆಸಿದರು. ಈ ಆಚರಣೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆ ಬೆಳೆ ಬೆಳೆಯಾಲಾಗದೇ ಕಂಗೆಟ್ಟಿರುವ ಸಂದರ್ಭದಲ್ಲಿ ಈ ರೀತಿ ಮಕ್ಕಳಿಗೆ ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಜನರದ್ದು. ಹೀಗಾಗಿ ಮಕ್ಕಳ ಮದುವೆ ಮಾಡಿಸಲಾಗಿದೆ. ಊರಿನ ಜನರ ಈ ನಂಬಿಕೆಗೆ ಸುಳ್ಳಾಗದೆ, ರಾಜ್ಯವೇ ವರ್ಷಧಾರೆಯ ಕೃಪೆಗೆ ತಣ್ಣಗಾಗಲಿ ಎಂದು ಗ್ರಾಮದ ರೈತ ಸೊಣ್ಣಪ್ಪರೆಡ್ಡಿ ಹೇಳಿದರು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈ ಬಾರಿ ನೀರಿಕ್ಷಿಸಿದಷ್ಟು ಮಳೆ ಬಾರದೆ ಇದ್ದುದರಿಂದಾಗಿ, ಮೆಕ್ಕೆಜೋಳ,ನೆಲಗಡಲೆ, ಅವರೆ, ಅಲಸಂದೆ, ಸಾಸಿವೆ, ಹುಚ್ಚೆಳ್ಳು,ತೊಗರಿ, ಸೇರಿದಂತೆ ಮಳೆಯಾಶ್ರಿತ ಬೆಳೆಗಳೆಲ್ಲವೂ ಒಣಗಿ ಬಾಡಿ ಹೋಗುತ್ತಿವೆ. ಹೀಗಾಗಿ ಅನ್ನದಾತರು ಆಕಾಶದತ್ತ ಮುಖ ಮಾಡಿ ಮಳೆ ಯಾವಾಗ ಬರುತ್ತದೆ ಎಂದು ಕಾದು ನೋಡುವಂತಾಗಿದೆ. ಇನ್ನು ಮಳೆಗಾಗಿ ಹಾತೊರೆಯುತ್ತಿರುವ ಜನರು ಹಳೆಯ ಸಂಪ್ರದಾಯಗಳ ಮೊರೆ ಹೋಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!