
ಉದಯವಾಹಿನಿ ರಾಮನಗರ: ತಾಲ್ಲೂಕಿನ ಕಸಬಾ ಹೋಬಳಿಯ ಸುಗ್ಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶತಮಾನದ ಹಿಂದೆ ಪ್ರಾರಂಭಗೊಂಡ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರವನ್ನು ಗ್ರಾಮಸ್ಥರು ಮತ್ತು ಶಾಲೆಯ ವತಿಯಿಂದ ಸಡಗರ, ಸಂಭ್ರಮದಿಂದ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರ್ಪಿತಾ ಹರೀಶ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಗ್ರಾಮದ ಈ ಪಾಠಶಾಲೆಯು ಸ್ಥಾಪನೆಯಾಗಿ ಸುಮಾರು 110 ವರ್ಷ ಆಗಿದ್ದು ಈ ಶಾಲೆಯ ಶತಮಾನೋತ್ಸವ ಸಮಾರಂಭ ಏರ್ಪಡಿಸಲು ಎಲ್ಲರ ಸಹಕಾರ ಅತ್ಯಮೂಲ್ಯವಾಗಿದ್ದು, ನಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಕ್ಷೇತ್ರಗಳಲ್ಲಿ ಇರುವ ಮಕ್ಕಳ ಪ್ರತಿಭೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮೊದಲ ಹಂತದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಲು ಈ ಕಾರ್ಯಕ್ರಮ. ಸಹಕಾರಿಯಾಗಿದ್ದು, ಶಿಕ್ಷಕರೆಲ್ಲರೂ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸುವುದರ ಮೂಲಕ ಸಹಕಾರ ನೀಡಬೇಕೆಂದು ಕೋರಿದರು.ಜಾನವಿ ಅಕಾಡೆಮಿಯ ಕಾರ್ಯದರ್ಶಿಗಳಾದ ಶಿಲ್ಪ ಮಾತನಾಡಿ, ಕ್ಲಸ್ಟರ್ ಹಂತದಲ್ಲಿ ವಿಜೇತರಾದ ಅತ್ಯುತ್ತಮ ಪ್ರತಿಭೆಗಳಿಗೆ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವ ಅವಕಾಶವಿದ್ದು, ಇದರ ಸದುಪಯೋಗ ಪಡೆದು ಮಕ್ಕಳನ್ನು ವಿವಿಧ ಹಂತಗಳಲ್ಲಿ ಸ್ಪರ್ಧಿಸುವಂತೆ ಪ್ರೋತ್ಸಾಹ ನೀಡಬೇಕೆಂದು ಹರಿಸಬೇಕೆಂದು ಮನವಿ ಮಾಡಿದರು. ಗ್ರಾಪಂ ಸದಸ್ಯರಾದ ರಾಂಪುರ ಗೋವಿಂದಾಜು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಗ್ರಾಮದ ಹಿರಿಯರಾದ ಪೋಲೀಸ್ ಬಸವರಾಜು, ಅರ್ಚಕರಾದ ಲೋಕೇಶ್, ರಮೇಶ್ ಹಾಗು ಸಿ.ಆರ್.ಪಿ, ರೇಣುಕಮ್ಮ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಎಲ್ಲಾ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗು ಸದಸ್ಯರು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಮತ್ತು ಸುಗ್ಗನಹಳ್ಳಿ ಗ್ರಾಮಸ್ಥರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು.
