
ಉದಯವಾಹಿನಿ, ಬೀದರ್ : ಮಕ್ಕಳ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಶಶಿಧರ ಕೋಸಂಬೆ ಅವರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡುತ್ತಿರುವುದು ಮಾದರಿ ಎನಸಿದೆ. ಅವರು ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು. ಭಾಲ್ಕಿ ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಇವರ ಮಕ್ಕಳಾದ ಕು.ಅಮೃತಾ ಚಿ.ಆದಿತ್ಯ ಇವರ ಶಾಲು ಮತ್ತು ಕಿರುಗೊಣಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಕ್ಕಳಿಗಾಗಿ ಮಕ್ಕಳ ಹಕ್ಕುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಮಾಜ ಸೇವೆ ಮತ್ತು ಮಕ್ಕಳ ಸೇವೆಗಾಗಿ ಶಶಿಧರ ಕೋಸಂಬೆ ಅವರು ನಿರಂತರವಾಗಿ ದುಡಿಯುತ್ತಿದ್ದಾರೆ. ಈ ಹಿಂದೆ ಅವರು ಜಿಲ್ಲೆಯಲ್ಲಿ ಕನ್ನಡಪರ ಸಂಘಟನೆ, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ ಸದಸ್ಯರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಮಕ್ಕಳ ಸಮಸ್ಯೆ, ತೊಂದರೆಗಳನ್ನು ಬಗೆ ಹರಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಬಣ್ಣಿಸಿದರು.ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಅವರು ಗ್ರಂಥ ಬಿಡುಗಡೆ ಮಾಡಿದರು.
ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಬಸವಲಿಂಗ ದೇವರು ಸಮ್ಮುಖ ವಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ಪಾರ್ವತಿ ಸಂಗಶೆಟ್ಟಿ, ವಿದ್ಯಾವತಿ ಗಡೆ, ಕೀರ್ತಿ ಶಶಿಧರ ಸೇರಿದಂತೆ ಹಲವರು ಇದ್ದರು. ಇದೇ ವೇಳೆ ಲೋಕನಾಥ ಚಾಂಗ್ಲೇರಾ, ಯಲ್ಲನಗೌಡ ಬಾಗಲಕೋಟ್ ವಚನ ಸಂಗೀತ ನಡೆಸಿ ಕೊಟ್ಟರು. ಗುರುಪ್ರಸಾದ ಶಾಲೆಯ ಮಕ್ಕಳು ವಚನ ನೃತ್ಯಕ್ಕೆ ಹೆಜ್ಜೆ ಹಾಕಿದರು. ಶಶಿಧರ ಕೋಸಂಬೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ರಾಜೇಶ್ವರಿ ವಂಕೆ ವಂದಿಸಿದರು.
