
ಉದಯವಾಹಿನಿ ನಾಗಮಂಗಲ: ಕ್ರೀಡೆಗಳು ಮಾನವನ ದೈಹಿಕ ಆರೋಗ್ಯದ ಜೊತೆಗೆ ಬೌದ್ಧಿಕ ಪ್ರೌಢಮೆಯನ್ನು ವೃದ್ಧಿಸುತ್ತವೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು ಅಭಿಪ್ರಾಯಪಟ್ಟರು.ಅವರಿಂದು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಇತ್ತೀಚೆಗೆ ಬೆಂಗಳೂರಿನ ಹೆಸರಘಟ್ಟ ರಸ್ತೆಯ ಬಿಜಿಎಸ್ ಸರ್ಕಾರಿ ಕ್ರೀಡಾಂಗಣದಲ್ಲಿ ಐ ಸಿ ಎಸ್ ಇ ಪಠ್ಯಕ್ರಮದ ಶಾಲಾ ವಿದ್ಯಾರ್ಥಿಗಳಿಗಾಗಿ ಹೆಸರಘಟ್ಟದ ವಿದ್ಯಾಶ್ರೀ ಪಬ್ಲಿಕ್ ಸ್ಕೂಲ್ ಸಂಘಟಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ 124 ಐಸಿಎಸ್‌ಸಿ ಶಾಲೆಗಳು ಭಾಗವಹಿಸಿದ್ದವು. 17 ವರ್ಷದ ಕೆಳಗಿನವರ ವಾಲಿಬಾಲ್ ಪಂದ್ಯಾವಳಿಯಲ್ಲಿ ನಾಗಮಂಗಲ ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಿಕ್ಷಣ ಟ್ರಸ್ಟ್ ಹಾಗೂ ಜಿಲ್ಲೆಗೆ ಹೆಸರು ತಂದಿರುವುದು ಸಂತಸದ ವಿಷಯವಾಗಿದೆ ಎಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹಾಗೂ ಶಿಕ್ಷಣ ಟ್ರಸ್ಟ್ ಪರವಾಗಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ರಾಷ್ಟ್ರಮಟ್ಟದ ಪಂದ್ಯಾವಳಿಗಳು ತಮಿಳುನಾಡಿನ ಊಟಿಯಲ್ಲಿ ಇದೇ ತಿಂಗಳ 29 ರಿಂದ ನಡೆಯುತ್ತಿದ್ದು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ನೀವು ಗೆಲುವು ಸಾಧಿಸಿ, ಯಶಸ್ವಿ ಕ್ರೀಡಾಪಟುಗಳಾಗಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ವಿ ಪುಟ್ಟಸ್ವಾಮಿ, ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಟಿ ಎನ್ ಶಿಲ್ಪಾ, ಉಪ ಪ್ರಾಂಶುಪಾಲೆ ದರ್ಶಿನಿ ಸಿ, ಕ್ರೀಡಾ ತರಬೇತುದಾರರಾದ ಚೇತನ್ ಕೆ ಎಂ, ಜೋಬಿ ಜೋಸೆಫ್, ಯೋಗೇಶ್ ಎಚ್ ಎನ್ ಹಾಜರಿದ್ದರು.
