
ಉದಯವಾಹಿನಿ ಶಿಡ್ಲಘಟ್ಟ: ಶಾಲಾಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜವಾಬ್ದಾರಿತವಾಗಿ ಮೂರು ವರ್ಷಗಳ ಕಾಲ ಸಸ್ಯಗಳನ್ನು ಬೆಳೆಸುವುದಾದರೆ ಮಾತ್ರ ಈ ಕಾರ್ಯಕ್ರಮಕ್ಕೆ ಯಶಸ್ಸು ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನವಾದ ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ತಾಲೂಕಿನ ವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೊರೋನಾ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಎಷ್ಟು ಜನ ಪ್ರಾಣ ಕಳೆದುಕೊಂಡರೆಂದು ನಾವು ಕಂಡಿದ್ದೇವೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರು ಒಂದೊಂದು ಗಿಡವನ್ನು ಬೆಳೆಸುವ ಜವಾಬ್ದಾರಿಯನ್ನು ತೆಗೆದುಕೊಂಡಾಗ ಮಾತ್ರ ಮುಂದಿನ ಪೀಳಿಗೆಯನ್ನು ಉಳಿಸಬಹುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ ನರೇಂದ್ರ ಕುಮಾರ್ ಮಾತನಾಡಿ ಶಾಲೆಯ ಪ್ರತಿಯೊಂದು ಮಗುವಿಗೆ ಒಂದೊಂದು ಗಿಡವನ್ನು ದತ್ತುವಿಗೆ ಕೊಟ್ಟು ಆ ಮಗುವಿನ ಹೆಸರಲ್ಲಿ ಗಿಡವನ್ನು ಬೆಳೆಸುವುದು ಈ ಸುತ್ತೋಲೆಯ ಪ್ರಮುಖ ಅಂಶವಾಗಿದೆ. ಮಗು ಸಸ್ಯವನ್ನು ಪ್ರೀತಿಯಿಂದ ಜವಾಬ್ದಾರಿಯಿಂದ ನೋಡಿಕೊಳ್ಳುಲೆಂದು ತಾಲೂಕಿನಲ್ಲಿ 3547 ಗಿಡಗಳನ್ನು ನೆಡುವ ಗುರಿಯಾಗಿದ್ದು ಅದರ ಅಂಗವಾಗಿ ಶಾಲೆಗಳನ್ನು ಸಹ ಗುರುತಿಸಿದ್ದು ಆ ಶಾಲೆಗಳಿಗೆ ಮಂಗಳವಾರದಿಂದ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ಸರಬರಾಜು ಮಾಡಲಾಗುತ್ತಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿರುತ್ತದೆ ಎಂದರು.ಉಪವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ನೌಕರರ ಸಂಘದ ಅಧ್ಯಕ್ಷ ಕೆ.ಎನ್ ಸುಬ್ಬಾರೆಡ್ಡಿ,ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಸಿ.ಎಂ. ಮುನಿರಾಜು. ಮುಖಂಡರಾದ ಬಂಕ್ ಮುನಿಯಪ್ಪ. ತಾದೂರು ರಘು.ಎಸ್.ಎಂ ರಮೇಶ್, ಎಸ್ ಡಿ.ಎಮ್.ಸಿ. ಅಧ್ಯಕ್ಷ ಮಂಜುನಾಥ್. ಮುಖ್ಯ ಶಿಕ್ಷಕ ಜಿ.ವೆಂಕಟೇಶ್. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ್ ಕೆ. ಕ್ಷೇತ್ರ ಸಮನ್ವಯ ಅಧಿಕಾರಿ ಎನ್ ತ್ಯಾಗ ರಾಜ್ ಮತ್ತಿತರರು ಉಪಸ್ಥಿತರಿದ್ದರು.
