
ಉದಯವಾಹಿನಿ ಕುಶಾಲನಗರ :-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭವ ಕಾರ್ಯಕ್ರಮದ ಪ್ರಯುಕ್ತ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮೇಳಕ್ಕೆ ಚಾಲನೆ ನೀಡಲಾಯಿತು. ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಶಿಬಿರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಉಚಿತ ಆರೋಗ್ಯ ಶಿಬಿರಗಳು ಹೆಚ್ಚಿನ ಫಲಾನುಭವಿಗಳಿಗೆ ತಲುಪುವಂತಾಗಬೇಕಿದೆ. ಆರೋಗ್ಯ ಶಿಬಿರಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ದೊರಕುವ ಅಗತ್ಯ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಜಾಗೃತಿಮೂಡಿಸುವ ಕೆಲಸ ಆಗಬೇಕಿದೆ. ಆಗ ಮಾತ್ರ ಇಂತಹ ಶಿಬಿರಗಳು ಪರಿಣಾಮಕಾರಿಯಾಗಿ ಯಶಸ್ಸು ಗಳಿಸಲು ಸಾಧ್ಯ ಎಂದರು.ನೇತ್ರದಾನ, ಅಂಗಾಗ ದಾನ ನೋಂದಣಿ ಕೇಂದ್ರ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ನಮ್ಮನ್ನಾಳುವ ಸರಕಾರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಅತಿ ಮುಖ್ಯ. ಕಾಲಕಾಲಕ್ಕೆ ಆರೋಗ್ಯ ತಪಾಸಣೆಗಳಿಗೆ ಒಳಗಾಗುವ ಮೂಲಕ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕಿದೆ ಎಂದರು.ಆರೋಗ್ಯ ಮೇಳದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ಸೇವೆಗಳು, ಮಕ್ಕಳ ಸೇವೆಗಳು, ಕಣ್ಣು, ಕಿವಿ, ಮೂಗು, ಗಂಟಲು ತಪಾಸಣೆ, ಮಾನಸಿಕ ತಜ್ಞರ ಸೇವೆಗಳು ಹಾಗೂ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ನೋಂದಣಿ, ಕಫಸಂಗ್ರಹಣೆ, ಅಸಾಂಕ್ರಾಮಿಕ ರೋಗಗಳ ತಪಾಸಣೆ, ಐಸಿಟಿಸಿ ಸಮಾಲೋಚನೆ ಹಾಗೂ ಇತರೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಪಪಂ ಮಾಜಿ ಸದಸ್ಯ ಜೋಸೆಫ್ ವಿಕ್ಟರ್ ಸೋನ್ಸ್, ಪ್ರಮುಖರಾದ ನಟೇಶ್ ಗೌಡ ಸೇರಿದಂತೆ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಧುಸೂದನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ ಹಾಗೂ ವೈದ್ಯ ವೃಂದ, ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಇದ್ದರು.
2 Attachments • Scanned by Gmail
